ಮಂಗಳೂರು : ಅವರಿಬ್ಬರೂ ಸ್ನೇಹಿತರು. ಹಣ ಸಂಪಾದನೆ ಕಂಡು ಕೊಂಡಿದ್ದು ಮಾತ್ರ ಖತರ್‌ನಾಕ್ ಮಾರ್ಗ. ಪಾರ್ಟಿಯ ನೆಪದಲ್ಲಿ ಪರಿಚಯಸ್ಥರ ಮನೆಗೆ ಬಂದಿದ್ದ ಅವರು ಇಬ್ಬರೂ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅಶೀಲ ವಿಡಿಯೋ ಶೂಟ್ ಮಾಡಿದ್ದಾರೆ. ಹನಿಟ್ರ್ಯಾಪ್ ಮಾಡೋಕೆ ಹೋದ ಅವರಿಬ್ಬರು ಕೊನೆಗೆ ಜೈಲು ಸೇರಿದ್ದಾರೆ.
ಮಂಗಳೂರು ಹೊರವಲಯದ ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಹತೀಜಮ್ಮ ಅಲಿಯಾಸ್ ಸಫ್ನಾ (23 ವರ್ಷ) ಹಾಗೂ ಅಝ್ವೀನ್ ಸಿ. (24 ವರ್ಷ) ಎಂಬವರೇ ಬಂಧಿತ ಆರೋಪಿಗಳು. ಇತ್ತೀಚಿಗಷ್ಟೆ ದುಬೈನಿಂದ ಬಂದಿದ್ದ ವ್ಯಕ್ತಿಯೋರ್ವರ ಜೊತೆಗೆ ಇಬ್ಬರೂ ಆರೋಪಿಗಳು ಸ್ನೇಹ ಸಂಪಾದನೆ ಮಾಡಿಕೊಂಡಿದ್ದಾರೆ. ಅಲ್ಲದೇ ಮನೆಯಲ್ಲಿ ಪಾರ್ಟಿ ಮಾಡೋದಾಗಿ ಒಪ್ಪಿಸಿದ್ದಾರೆ.
ನಂತರ ಆ ವ್ಯಕ್ತಿಯ ಮನೆಗೆ ತೆರಳಿ ಪಾರ್ಟಿ ಮಾಡಿದ್ದಾರೆ. ಮಧ್ಯಪಾನದಲ್ಲಿ ಮತ್ತು ಬರೋ ಔಷಧವನ್ನು ಬೆರೆಯಿಸಿಕೊಟ್ಟು ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ವ್ಯಕ್ತಿಯನ್ನು ವಿವಸ್ತ್ರ ಗೊಳಿಸಿ ಅಶ್ಲೀಲ ಪೋಟೋ ಹಾಗೂ ವಿಡಿಯೋವನ್ನು ಶೂಟ್ ಮಾಡಿಕೊಂಡು, ಮನೆಯಲ್ಲಿದ್ದ ಮನೆಯ ಕಪಾಟುವಿನಲ್ಲಿದ್ದ 2.12 ಲಕ್ಷ ರೂ. ನಗದು ಹಾಗೂ ವ್ಯಕ್ತಿಯ ಕೈಯಲ್ಲಿದ್ದ ನವರತ್ನದ ಉಂಗುರವನ್ನುಕಳವು ಮಾಡಿ ಪರಾರಿಯಾಗಿದ್ದಾರೆ.
ಮರುದಿನ ವ್ಯಕ್ತಿ ಕರೆ ಮಾಡಿ ಹಣ ಹಾಗೂ ಉಂಗುರ ನೀಡದಿದ್ರೆ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆಯಲ್ಲಿ ಇಬ್ಬರೂ ಆರೋಪಿಗಳು ತಾವು ಮಾಡಿಕೊಂಡಿದ್ದ ವಿಡಿಯೋ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ನಂತರ ಹನಿಟ್ರ್ಯಾಪ್‌ಗೆ ಒಳಗಾದ ವ್ಯಕ್ತಿ ಉಳ್ಳಾಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಆರೋಪಿಗಳು ಇಂತಹದ್ದೇ ಕೃತ್ಯವನ್ನು ಈ ಹಿಂದೆ ನಡೆಸಿದ್ದಾರೆಯೇ ಅನ್ನೋ ಕುರಿತು ವಿಚಾರಣೆ ನಡೆಯುತ್ತಿದೆ. ಗೌರವಕ್ಕೆ ಧಕ್ಕೆಯಾಗುತ್ತೆ ಅಂತಾ ಸುಮ್ಮನೆ ಇರೋ ಬದಲು ಇಂತಹ ಕೃತ್ಯಗಳು ನಡೆದಾಗ ಪೊಲೀಸರಿಗೆ ದೂರು ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.