ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ವಿಗ್ರಹ, ಒಡವೆ ನಾಪತ್ತೆ : ಆಡಳಿತ ಮಂಡಳಿ ವಿರುದ್ದ ಎಸಿಬಿಗೆ ದೂರು

ಕುಕ್ಕೆ ಸುಬ್ರಹ್ಮಣ್ಯ : ರಾಜ್ಯದ ಅತ್ಯಂತ ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿರೋ ಕುಕ್ಕೆ ಸುಬ್ರಹ್ಮಣ್ಯನ ದೇವಸ್ಥಾನದಲ್ಲಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ದೇವರ ವಿಗ್ರಹ, ಒಡವೆಗಳು ನಾಪತ್ತೆಯಾಗಿದ್ದು, ಆಡಳಿತ ಮಂಡಳಿಯ ವಿರುದ್ದ ಎಸಿಬಿಗೆ ದೂರು ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ರಾಜ್ಯದ ಅತ್ಯಂತ ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿದೆ. ವರ್ಷಂಪ್ರತಿ 80 ಕೋಟಿಗೂ ಅಧಿಕ ಆದಾಯಗಳಿಸುತ್ತಿದೆ. ಆದರೆ ಇಂತಹ ಶ್ರೀಮಂತ ದೇಗುಲದಲ್ಲೀಗ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ದ ದೇವರ ಆಭರಣಗಳಲ್ಲಿ ಅವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿದೆ.

ದೇವಸ್ಥಾನದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಜ್ರದ ಕಂಠಿಹಾರ, ಆಭರಣಗಳು, ಶ್ರೀಸತ್ಯನಾರಾಯಣ ದೇವರ ಫೋಟೋ, ಶ್ರೀ ಕುಕ್ಕೆ ಲಿಂಗ ದೇವಳದ ಬಳಿ ಇದ್ದ ಬೆಳ್ಳಿಯ ಒಡವೆಗಳು, ಪುರಾತನ ಕಾಲದ ವಿಗ್ರಹಗಳು ನಾಪತ್ತೆಯಾಗಿವೆ. ಈ ಕುರಿತು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಮೋನಪ್ಪ ಮಾನಾಡು ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿ ರವೀಂದ್ರ ಎಂ.ಎಚ್. ಅವರಲ್ಲಿ ಮಾಹಿತಿಯನ್ನು ಕೇಳಿದ್ದರು.

ಆದರೆ ಒಂದು ವರ್ಷ ಕಳೆದರೂ ಕೂಡ ಆಡಳಿತ ಮಂಡಳಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ನಿರ್ದೇಶಕರಾಗಿರುವ ಶ್ರೀನಾಥ್ ಟಿ.ಎಸ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೂ ಆಡಳಿತಾಧಿಕಾರಿಯಾಗಲಿ, ಕಾರ್ಯ ನಿರ್ವಹಣಾಧಿಕಾರಿಯೇ ಆಗಲಿ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಲಾಗಿದೆ.

ಇದನ್ನು ಓದಿ : ಗಜಕೇಸರಿ ಯೋಗದಲ್ಲಿ ಧರೆಗೆ ಬಂದ ಜ್ಯೂನಿಯರ್ ಚಿರು…! ಜ್ಯೋತಿಷ್ಯಿಗಳು ಏನಂತಾರೆ ಗೊತ್ತಾ…!!

ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ ಮತ್ತು ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರ ವಿರುದ್ದ ಮಾನವಹಕ್ಕು ಹೋರಾಟಗಾರ ಶ್ರೀನಾಥ್ ಟಿ.ಎಸ್. ಅವರು ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೋಲಿಸ್ ಅಧೀಕ್ಷಕರಿಗೆ ದೂರು ದಾಖಲಿಸಿದ್ದು, ತನಿಖೆ ನಡೆಸುವಂತೆ ಎಸಿಬಿಗೆ ನೀಡಿದ ದೂರಿನಲ್ಲಿ ಮನವಿ ಮಾಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲೀಗ ದೇವರ ಆಭರಣ ನಾಪತ್ತೆಯಾಗಿರೋ ವಿಚಾರ ಭಕ್ತರಲ್ಲಿ ಗೊಂದಲ ಮೂಡಿಸಿದೆ. ಈ ಹಿಂದೆ ಕೊಲ್ಲೂರು ದೇವಸ್ಥಾನದಲ್ಲಿಯೂ ದೇವರ ಚಿನ್ನವನ್ನು ಅಡವಿಟ್ಟು ಅವ್ಯವಹಾರ ನಡೆಸಿರೋದು ಬೆಳಕಿಗೆ ಬಂದಿತ್ತು. ಇದೀಗ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೂ ಇಂತಹದ್ದೇ ಅವ್ಯವಹಾರ ನಡೆದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

Comments are closed.