ವಾಹನ ಸವಾರರೇ ಹುಷಾರ್..! ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೇ ಮನೆಗೆ ಬರ್ತಾರೆ ಪೊಲೀಸರು…!!

ಬೆಂಗಳೂರು: ಶತಾಯ-ಗತಾಯ ಸಂಚಾರಿ ನಿಯಮ‌ ಉಲ್ಲಂಘನೆ ತಪ್ಪಿಸೋಕೆ ಸರ್ಕಸ್ ಮಾಡ್ತಿರೋ ನಗರ ಪೊಲೀಸ್ ಇಲಾಖೆ ದಂಡ ವಸೂಲಿ ಗೆ ಮನೆ ಬಾಗಿಲಿಗೆ ಬಂದು ನಿಲ್ಲಲು ನಿರ್ಧರಿಸಿದೆ.

ಹೌದು ಅದೆಷ್ಟೇ ದುಬಾರಿ ದಂಡ ವಿಧಿಸಿದ್ರೂ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಎಗ್ಗಿಲ್ಲದೇ ನಡಿತಾನೇ ಇದೆ. ರೂಲ್ಸ್ ಬ್ರೇಕ್ ಮಾಡಿದ್ರೇ ನೊಟೀಸ್ ಮನೆಗೆ ಬರುತ್ತೆ ಅಷ್ಟೇ ತಾನೇ ಅಂತ ಜನ ಹಾಯಾಗಿದ್ದಾರೆ. ಹೀಗಾಗಿ ಸ್ವತಃ ಪೊಲೀಸರೇ ಮನೆ ಬಾಗಿಲಿಗೆ ಬಂದು ದಂಡ ವಸೂಲಿ ಮಾಡಲು ಮುಂಧಾಗಿದ್ದಾರೆ.

ನಗರ ಸಂಚಾರಿ ಪೊಲೀಸರು ಇಂತಹದೊಂದು ಸಾಹಸಕ್ಕೆ ಮುನ್ನುಡಿ ಬರೆದಿದ್ದು, ಶಿವಾಜಿನಗರ, ಪುಲಿಕೇಶಿನಗರ,ಭಾರತಿನಗರ,ಕಾಕ್ಸ್ ಟೌನ್, ಇಂದಿರಾನಗರ, ಬೈಯ್ಯಪ್ಪನಹಳ್ಳಿ, ಕೋರಮಂಗಲ ಹೀಗೆ ಹಲವೆಡೆ ಪ್ರಾಯೋಗಿಕವಾಗಿ ಈ ದಂಡವಸೂಲಿ ಆರಂಭಗೊಂಡಿದೆ.

ಇದುವರೆಗೂ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಟಿಎಂಸಿ ಸೆಂಟರ್ ನಿಂದ ನೇರವಾಗಿ ನೊಟೀಸ್ ಜಾರಿಯಾಗುತ್ತಿತ್ತು. ಈ ನೋಟಿಸ್ ಬಂದ ಬಳಿಕ ಸವಾರರು ಬೆಂಗಳೂರು ಒನ್ ಸೆಂಟರ್ ಅಥವಾ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ತೆರಳಿ ದಂಡ ಕಟ್ಟಬೇಕಿತ್ತು. ಆದರೆ ಜನ ದಂಡ ಕಟ್ಟದೇ ಎಸ್ಕೇಪ್ ಆಗ್ತಿದ್ದರು.

ಇದಕ್ಕಾಗಿ ಸಂಚಾರಿ ಪೊಲೀಸರು ಹೊಸ ಪ್ರಯತ್ನ ಆರಂಭಿಸಿದ್ದು, ಒರ್ವ ಎಎಸ್ಐ ಹಾಗೂ ಸಂಚಾರಿ ಪೊಲೀಸ್ ಪೇದೆ ಮನೆಗೆ ಬಂದು ದಂಡದ ನೋಟಿಸ್ ನೀಡಿ ಹಣ ಕಟ್ಟಿಸಿಕೊಂಡು ರಿಸೀಟ್ ನೀಡಿ ಹೋಗುತ್ತಿದ್ದಾರೆ.ಈ ಯೋಜನೆ ಸಧ್ಯ ನಗರದ ಆಯ್ದ ಕೆಲ ಪ್ರದೇಶದಲ್ಲಿ ಜಾರಿಯಾಗಿದ್ದು, ಉಳಿದ ಏರಿಯಾಗಳಲ್ಲಿ ಸಧ್ಯದಲ್ಲೇ ಆರಂಭವಾಗಲಿದೆ.

ಜನರು ನಿಯಮ ಉಲ್ಲಂಘಿಸದಂತೆ ಅವರಿಗೆ ಚುರುಕು ಮುಟ್ಟಿಸುವುದು ಹಾಗೂ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ತಪ್ಪಿಸಿಕೊಳ್ಳುವ ಪ್ರವೃತ್ತಿ ತಪ್ಪಿಸಲು ಈ ಪ್ರಯತ್ನ ಆರಂಭಿಸಿದ್ದೇವೆ ಅಂತಾರೆ ನಗರ ಸಂಚಾರಿ ಪೊಲೀಸರು.

ಆದರೆ ಬೆಳ್ಳಂಬೆಳಗ್ಗೆ ಪೊಲೀಸರು ನೊಟೀಸ್ ತಗೊಂಡು ಮನೆ ಬಾಗಿಲಿಗೆ ಬರ್ತಿರೋದಕ್ಕೆ ವಾಹನ ಸವಾರರು ಕಿಡಿ ಕಿಡಿ ಕೆಂಡವಾಗಿದ್ದು, ಓಡಾಡೋಕೆ ನೆಟ್ಟಗೆ‌ ರಸ್ತೆ ನಿರ್ಮಿಸೋ ಯೋಗ್ಯತೆ ಇಲ್ಲ. ಜನರ ದುಡ್ಡನ್ನು ಹೀರೋಕೆ ಕಾಯ್ತಾ ಇರ್ತಾರೆ ಅಂತ ಬೈತಿದ್ದಾರೆ.

Comments are closed.