Mangalore Civil strike: ಮಂಗಳೂರು : ಇಂದಿನಿಂದ ಪೌರಕಾರ್ಮಿಕ ಮುಷ್ಕರ : ತ್ಯಾಜ್ಯ ವಿಲೇವಾರಿ, ನೀರು ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

ಮಂಗಳೂರು : (Mangalore Civil strike) ನೇರ ವೇತನ, ಉದ್ಯೋಗ ಖಾಯಂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟಿದ್ದಾರೆ. ಇದರಿಂದಾಗಿ ಇಂದಿನಿಂದ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು ಸೇರಿದಂತೆ ಹಲವು ಮೂಲಸೌಲಭ್ಯಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಿಗೆ ಹೊರಗುತ್ತಿಗೆ ನೌಕರರಿಗೆ ನೇರ ವೇತನ ನೀಡಿ ಹಂತ ಹಂತವಾಗಿ ಖಾಯಂಗೊಳಿಸುವಂತೆ ಒತ್ತಾಯಿಸಿ ತ್ಯಾಜ್ಯ ಸಾಗಣೆ ವಾಹನಗಳ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್‌ಗಳು, ಕ್ಲೀನರ್‌ಗಳು, ಸಹಾಯಕರು ಮತ್ತು ಭೂಗತ ಒಳಚರಂಡಿ ಕಾರ್ಮಿಕರು ಫೆಬ್ರವರಿ 1 ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಂಚಾಯಿತಿ ಹೊರಗುತ್ತಿಗೆ ಕಾರ್ಮಿಕರ ಸಂಘದ ಕರಾವಳಿ ವಿಭಾಗದ ಸಂಚಾಲಕ ಬಿ.ಕೆ.ಅಣ್ಣಪ್ಪ ಕರೆಕಾಡು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಒಟ್ಟು 15 ಸಾವಿರಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರಿದ್ದಾರೆ. 330 ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಪೌರಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.1ರಿಂದ ಅನಿರ್ದಿಷ್ಟಾವಧಿಗೆ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಲಾಗುವುದು. ಜಿಲ್ಲೆಯಾದ್ಯಂತ 900ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಮಂಗಳೂರು ನಗರದಲ್ಲಿಯೂ ಮೆರವಣಿಗೆ ಮತ್ತು ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಾವು ಪೌರ ಕಾರ್ಮಿಕರ ನೇರ ನೇಮಕಾತಿಯನ್ನು ಸ್ವಾಗತಿಸುತ್ತೇವೆ. ಆದರೆ ಹೊರಗುತ್ತಿಗೆ ಕಾರ್ಮಿಕರ ನ್ಯಾಯಾಂಗ ಹಕ್ಕುಗಳನ್ನು ಸಹ ನಾವು ಒತ್ತಾಯಿಸುತ್ತೇವೆ. ಒಂದೇ ಇಲಾಖೆಯಲ್ಲಿ ಒಡೆದು ಆಳುವ ನೀತಿ ಅನುಸರಿಸುವುದು ಸರಿಯಲ್ಲ. ಇದನ್ನು ಸರಿ ಪಡಿಸಿ ಹಂತ ಹಂತವಾಗಿ ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪೌರ ಕಾರ್ಮಿಕರ ಪ್ರತಿಭಟನೆ, ಮುಷ್ಕರದ ಬಿಸಿ ರಾಜ್ಯದಾದ್ಯಂತ ತಟ್ಟುವ ಸಾಧ್ಯತೆಯಿದೆ.

ಇದನ್ನೂ ಓದಿ : Beltangadi Auto accident: ಸೇತುವೆ ಗೋಡೆಗೆ ಆಟೋ ರಿಕ್ಷಾ ಢಿಕ್ಕಿ: 1.2 ವರ್ಷದ ಮಗು ಸಾವು, ಮೂವರಿಗೆ ಗಾಯ

ಇದನ್ನೂ ಓದಿ : ಮಂಗಳೂರು: ಅತಿಯಾಗಿ ಮೊಬೈಲ್‌ ಬಳಸುತ್ತಿದ್ದಕ್ಕೆ ಬೈದ ತಾಯಿ: ಮನನೊಂದು ನೇಣಿಗೆ ಶರಣಾದ ಬಾಲಕ

Mangalore Civil strike: Mangalore: Civil labor strike from today: Disruption in waste disposal, water supply possible

Comments are closed.