ಪುತ್ತೂರು : ಯುವಕನೋರ್ವನ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಮೂವರು ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ನೆಟ್ಟಣಿಗೆ ಮುಡ್ನೂರಿನ ನಿವಾಸಿ ಶಾಫಿ, ಸವಣೂರು ಅತ್ತಿಕೆರೆಯ ನಿವಾಸಿ ಮಹಮ್ಮದ್ ಅಜರುದ್ದೀನ್, ಸವಣೂರು ಮಾಂತೂರಿನ ನಿವಾಸಿ ನಝೀರ್ ಎಂ ಅವರಿಗೆ ಪುತ್ತೂರಿನ ನ್ಯಾಯಾಲಯ ಮಧ್ಯಂತರ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಅಜರುದ್ದೀನ್ ಪರ ನ್ಯಾಯವಾದಿ ಸಿದ್ದಿಕ್ ಮಂಗಳೂರು, ನಝೀರ್ ಪರ ನೂರುದ್ದೀನ್ ಸಾಲ್ಮರ ಹಾಗೂ ಮಹಮ್ಮದ್ ಶಫಿ ಪರ ದುರ್ಗಪ್ರಸಾದ್ ರೈ ಕುಂಬ್ರ ವಾದ ಮಂಡಿಸಿದ್ದರು.
ಘಟನೆಯ ವಿವರ : ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಅಬ್ದುಲ್ ನಾಸೀರ್ (25 ವರ್ಷ) ಎಂಬವರಿಗೆ ಹನಿಟ್ರ್ಯಾಪ್ ನಡೆಸಿ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ವಸೂಲಿ ಮಾಡಲಾಗಿತ್ತು. ಈ ಕುರಿತು ಯುವಕ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಾರ್ಕಳದ ನಿವಾಸಿಯೆಂದು ಹೇಳಿಕೊಂಡಿದ್ದ ಯುವತಿ ತನಿಶಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಕೊಟ್ಯಾಡಿ ಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಮುಡ್ನೂರು ಚೀಚಗದ್ದೆಯ ನಿವಾಸಿ ಹನೀಫ್ ಯಾನೆ ಕೆಎಂವೈ ಹನೀಫ್, ಸವಣೂರಿನ ಅಝರ್, ಸಯೀದ್ ಮೋನು, ನಾಸಿರ್ ವಿರುದ್ದವೂ ಪ್ರಕರಣ ದಾಖಲಾಗಿತ್ತು. ಹನಿಟ್ರ್ಯಾಪ್ ಗೆ ಒಳಗಾಗಿದ್ದ ಯುವಕ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.