Santhekatte Highway problem : ಸಂತೆಕಟ್ಟೆ ಹೆದ್ದಾರಿ ಸಮಸ್ಯೆ : 3 ದಿನದಲ್ಲಿ ಪರಿಹಾರ ಹುಡುಕಿ, ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ

ಉಡುಪಿ : (Santhekatte Highway problem) ರಾಷ್ಟ್ರೀಯ ಹೆದ್ದಾರಿ 66 ರ ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಅಂಡರ್ ಪಾಸ್‌ಗಾಗಿ ತೋಡಿರುವ ಹೊಂಡದಿಂದಾಗಿ ಮಳೆಗಾಲದಲ್ಲಿ ಹೆದ್ದಾರಿ ಕುಸಿಯುವ ಅಪಾಯವಿದೆ. ಹೀಗಾಗಿ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ 3 ದಿನಗಳ ಒಳಗೆ ಸೂಕ್ತ ಪರಿಹಾರ ಹುಡುಕುವಂತೆ ರಾಷ್ಟ್ರೀಯ ಹೆದ್ದಾರಿ 66 ರ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ಉಡುಪಿ ತಾಲೂಕು ಕಚೇರಿಯಲ್ಲಿ, ಮಳೆಗಾಲದ ಹಿನ್ನಲೆ ಸಾರ್ವಜನಿಕರ ಹಿತದೃಷ್ಠಿಯಿಂದ ತುರ್ತಾಗಿ ಕೈಗೊಳ್ಳಬೇಕಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂತೆಕಟ್ಟೆ ಜಂಕ್ಷನ್ ನಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಕೈಗೊಂಡಿರುವ ಕಾಮಗಾರಿಯಿಂದ ಹೆದ್ದಾರಿ ಪಕ್ಕದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ಇದರಿಂದಾಗಿ ಮಳೆಗಾಲದಲ್ಲಿ ನೀರು ತುಂಬಿ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಂಭವಿದ್ದು, ಇದರಿಂದ ಈ ಭಾಗದಲ್ಲಿ ವಾಹನ ಸಂಚಾರ ಆಗುವ ಬಂದ್ ಆಗುವ ಸಾಧ್ಯತೆಯಿದೆ.

#image_title

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ , ಯಾವ ಸೂಕ್ತ ವಿಧಾನವನ್ನು ಅಳವಡಿಸುವ ಮೂಲಕ ಹೆದ್ದಾರಿ ಕುಸಿತ ತಡೆಯಬಹುದು ಹಾಗೂ ಸುರಕ್ಷಿತ ವಾಹನಗಳ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆಯನ್ನು ಶೀಘ್ರದಲ್ಲಿ ಸಿದ್ದಪಡಿಸಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು. ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಮಳೆ ಬೀಳುವುದನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಯ ಗಂಭೀರತೆಯನ್ನು ಅರ್ಥೈಸಿಕೊಂಡು ಯೋಜನೆ ರೂಪಿಸಿ, ಅತ್ಯಂತ ಶೀಘ್ರದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಲಮಿತಿಯಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು.

#image_title

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪೊಲೀಸ್ ಇಲಾಖೆಯಿಂದ ಗುರುತಿಸಲಾಗಿರುವ ಬ್ಲಾಕ್ ಸ್ಪಾಟ್ ಗಳಲ್ಲಿ ಅಗತ್ಯವಿರುವ ವೈಜ್ಞಾನಿಕ ಸುರಕ್ಷಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಂಡು ಲಿಖಿತ ವರದಿ ನೀಡುವಂತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಗರಸಭೆಯ ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆಗೆ ಕೆಲವಡೆ ತೊಂದರೆಯಾಗಿದ್ದು ಅದನ್ನು ಸರಿಪಡಿಸಿಕೊಡುವಂತೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಮರದ ಕೊಂಬೆಗಳನ್ನು ತಕ್ಷಣ ತೆರವುಗೊಳಿಸುವಂತೆ ತಿಳಿಸಿದ್ದಾರೆ.

#image_title

ಇನ್ನು ಜಿಲ್ಲಾಧಿಕಾರಿಗಳು ಪರ್ಕಳ ದಲ್ಲಿ ನ್ಯಾಯಾಲಯದ ತಡೆಯಾಜ್ಞೆಯಿಂದ ಸ್ಥಗಿತಗೊಂಡಿರುವ ಹೆದ್ದಾರಿ ಕಾಮಗಾರಿಯ ತಡೆಯಾಜ್ಞೆಯನ್ನು ತೆರವುಗೊಳಿಸುವ ಕುರಿತಂತೆ ರಾಜ್ಯದ ಅಡ್ವೋಕೇಟ್ ಜನರಲ್ ಅವರ ಬಳಿ ಚರ್ಚಿಸಿ, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವ ಬಗ್ಗೆ ಹಾಗೂ ಕಲ್ಸಂಕ ಜಂಕ್ಷನ್ ಮತ್ತು ಟೈಗರ್ ಸರ್ಕಲ್ ಬಳಿ ವಾಹನ ದಟ್ಟಣೆ ತಪ್ಪಿಸಿ, ಜನ ಸಾಮಾನ್ಯರ ಸಂಚಾರಕ್ಕೆ ಅನುಕೂಲವಾಗುವಂತೆ ಸೂಕ್ತ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು , ಮಣಿಪಾಲದಿಂದ ಕಲ್ಸಂಕವರೆಗೆ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ : World Blood Donor Day : ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯ : ಡಿಎಚ್ಓ ಡಾ.ನಾಗಭೂಷಣ ಉಡುಪ

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್ ಅಜ್ಮಿ, ಉಡುಪಿ ತಹಸೀಲ್ದಾರ್ ರವಿ ಅಂಗಡಿ, ನಗರಸಭೆಯ ಪೌರಾಯುಕ್ತ ರಮೇಶ್ ನಾಯಕ್, ಎನ್.ಹೆಚ್.169ಎ ವಿಭಾಗದ ಇಂಜಿನಿಯರ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Santhekatte highway problem: Find solution in 3 days, District Collector Kurmarao M instructs officials

Comments are closed.