ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ (Santhosh Patil Suicide Case) ಸಂಬಂಧಿಸಿದಂತೆ ಬಿಜೆಪಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಈಶ್ವರಪ್ಪಗೆ ಆತ್ಮಹತ್ಯೆ ಪ್ರಕರಣ ಕಂಟಕವಾಗಿ ಪರಿಣಮಿಸಿದೆ
ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ಮಧ್ಯರಾತ್ರಿ ಆಗಮಿಸಿದ್ದು, ನನ್ನ ತಮ್ಮನ ಸಾವಿಗೆ ಈಶ್ವರಪ್ಪ ಕಾರಣ ಎಂದು ದೂರು ನೀಡಿದ್ದಾರೆ. ಸಾವಿಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ IPC-306, 34ರ ಅಡಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಆಪ್ತರಾಗಿರುವ ಬಸವರಾಜ್ ಹಾಗೂ ರಮೇಶ್ ಅವರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ತನ್ನ ಸ್ನೇಹಿತರ ಜೊತೆಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಈ ವೇಳೆಯಲ್ಲಿ ನಗರದ ಲಾಡ್ಜ್ ವೊಂದರಲ್ಲಿ ತಂಗಿದ್ದರು. ಲಾಡ್ಜ್ ರೂಂನಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಂತೋಷ್ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಈಶ್ವರಪ್ಪ ವಿರುದ್ದ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಅಲ್ಲದೇ ಸಂತೋಷ್ ಪಾಟೀಲ್ ಪತ್ನಿ ಈಶ್ವರಪ್ಪ ವಿರುದ್ದವೇ ಗಂಭೀರ ಆರೋಪವನ್ನು ಮಾಡಿದ್ದರು.
ಇದೀಗ ಕುಟುಂಬ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆಯಲ್ಲಿ ಮಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಉಡುಪಿಗೆ ಆಗಮಿಸಿ ಲಾಡ್ಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದ್ದಾರೆ. ಆದರೆ ಸಂತೋಷ್ ಪಾಟೀಲ್ ಪತ್ನಿ ತಾನು ಸ್ಥಳಕ್ಕೆ ಬರುವವರೆಗೂ ಮೃತ ದೇಹವನ್ನು ಸ್ಥಳಾಂತರ ಮಾಡದಿರುವಂತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಗೆ ಭದ್ರತೆ ಒದಗಿಸಿದ್ದಾರೆ.
ಇದನ್ನೂ ಓದಿ : ಈಶ್ವರಪ್ಪ ಗೆ ಮುಳುವಾಯ್ತು ಕಮೀಷನ್ ಕೇಸ್ : ರಾಜೀನಾಮೆಗೆ ಒತ್ತಡ
ಇದನ್ನೂ ಓದಿ : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪಗೆ ಸಂಕಷ್ಟ, ರಾಜ್ಯಪಾಲರಿಗೆ ಇಂದು ಕಾಂಗ್ರೆಸ್ ದೂರು
Santhosh Patil Suicide Case Minister Eshwarappa FIR Udupi Town Police Station