ಮಂಗಳೂರು : ಕರಾವಳಿ ಭಾಗದಲ್ಲಿ ದರೋಡೆ, ಕಳ್ಳತನ, ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ 6 ಮಂದಿ ಕುಖ್ಯಾತ ದರೋಡೆ ಕೋರರ ತಂಡವನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಕೇಶ್, ಅರ್ಜುನ್, ಮೋಹನ್, ಮುಹಮ್ಮದ್, ಝಭೈರ್, ಇಬ್ರಾಹಿಂ, ಲತೀಫ್ ಮತ್ತು ಮನ್ಸೂರ್ ಬೋಳಿಯಾರ್ ಬಂಧಿತ ಆರೋಪಿಗಳು. ಈ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಡಬಿದಿರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ದರೋಡೆ ಹಾಗೂ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿತ್ತು.

ಬಂಧಿತರಿಂದ ಕಾರು, ಮೊಬೈಲ್, ಫೋನ್ ಗಳು, ಏರ್ ಗನ್, ಚಿನ್ನ, ಬೆಳ್ಳಿ ಸೇರಿದಂತೆ ಒಟ್ಟು 41.82 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮಂಗಳೂರು ನಗರ ವ್ಯಾಪ್ತಿಯಲ್ಲಿ 7, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, ಹಾಸನ ಜಿಲ್ಲೆಯಲ್ಲಿ 2, ಚಿಕ್ಕಮಗಳೂರು 3, ಕೊಡಗು 5, ಉಡುಪಿ 2, ಮತ್ತು ಬೆಂಗಳೂರು ನಗರದಲ್ಲಿ 1 ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಇನ್ನು ಈ ತಂಡದಲ್ಲಿ ಇನ್ನಷ್ಟು ಮಂದಿ ಇರುವ ಸಾಧ್ಯತೆಯಿದ್ದು, ಈ ತಂಡಕ್ಕೆ ಸಹಕಾರ ನೀಡಿದವರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.