ನೆಲ್ಯಾಡಿ : ತುಳು ಚಿತ್ರರಂಗದ ಖ್ಯಾತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ನೀಮಾ ರೇ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹೊತ್ತಿ ಉರಿದಿದೆ. ಆದರೆ ಅದೃಷ್ಟವಶಾತ್ ನಟಿ ಸೇರಿದಂತೆ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ನಡೆದ ಬಸ್ ಹಾಗೂ ಕಂಟೈನರ್ ನಡುವಿನ ಅಪಘಾತದಲ್ಲಿ ಬಸ್ ಹಾಗೂ ಕಂಟೈನರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಆದರೆ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದವರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಬಸ್ಸಿನಲ್ಲಿ ತುಳು ಚಿತ್ರರಂಗದ ಖ್ಯಾತ ನಟಿ ನೀಮಾ ರೇ ಕೂಡ ಪ್ರಯಾಣಿಸುತ್ತಿದ್ದರು.
ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ನೀಮಾ ರೇ ಮಂಗಳೂರಿನಲ್ಲಿ ಬಸ್ಸನ್ನೇರಿದ್ದರು. ಆದರೆ ರಾತ್ರಿ 1 ಗಂಟೆಯ ಸುಮಾರಿಗೆ ನಟಿ ನೀಮಾ ರೇ ಪ್ರಯಾಣಿಸುತ್ತಿದ್ದ ಬಸ್ಸಿಗೆ ಕಂಟೈನರ್ ಢಿಕ್ಕಿಯಾಗಿದೆ. ಢಿಕ್ಕಿಯ ಶಬ್ದಕ್ಕೆ ಬಸ್ಸಿನಲ್ಲಿದ್ದವರು ಎದ್ದು ಕುಳಿತಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಬಸ್ಸಿನ ತುಂಬೆಲ್ಲಾ ದಟ್ಟ ಹೊಗೆ ಆವರಿಸೋದಕ್ಕೆ ಶುರುವಾಗಿದೆ. ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಾಕಷ್ಟು ಕಷ್ಟ ಪಟ್ಟು ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ.
ನೋಡ ನೋಡುತ್ತಿದ್ದಂತೆಯೇ ಕಂಟೈನರ್ ಹಾಗೂ ಬಸ್ಸು ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೂ ಕೂಡ ಗಾಯಗಳಾಗಿದ್ದು, ಗಾಯಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ನೀಮಾ ರೇ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.