ಉಡುಪಿ : ಮಣಿಪಾಲ ಹಾಗೂ ಉಡುಪಿ ನಗರದಲ್ಲಿ ಚಾಕು, ಸ್ಕ್ರೂ ಡ್ರೈವರ್ ನಿಂದ ಹಲ್ಲೆ ಮಾಡಿ ಸಾರ್ವಜನಿಕರಿಂದ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ನಿವಾಸಿ ಮೊಹಮ್ಮದ್ ಆಶಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಸಪ್ಟೆಂಬರ್ 19ರಂದು ಉಡುಪಿ ನಗರ ಹಾಗೂ ಮಣಿಪಾಲದ ಮೂರು ಕಡೆಗಳಲ್ಲಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಮಣಿಪಾಲ ಠಾಣೆಯಲ್ಲಿ ಒಟ್ಟು 3 ಪ್ರಕರಣ ದಾಖಲಾಗಿತ್ತು. ದರೋಡೆಕೋರರು ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಅಲರ್ಟ್ ಆದ ಉಡುಪಿ ಜಿಲ್ಲಾ SPವಿಷ್ಣುವರ್ಧನ್ ಅವರು ಆರೋಪಿಗಳ ಪತ್ತೆಗಾಗಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಹಾಗೂ ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ್ ಎಂ. ಗೌಡ ಅವರ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಿದ್ದರು.

ಆರೋಪಿ ಮೊಹಮ್ಮದ್ ಆಶಿಕ್ ಮಣಿಪಾಲದಲ್ಲಿ ಮತ್ತೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ವೇಳೆಯಲ್ಲಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ. ಇನ್ನು ಆರೋಪಿ ಆಶಿಕ್ ವಿರುದ್ದ ಒಟ್ಟು 4 ಪ್ರಕರಣ ದಾಖಲಾಗಿದ್ದು, ಬೆಂಗಳೂರಿನಲ್ಲಿ ಕಳವು ಮಾಡಿದ್ದ ಬೈಕ್ ನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.