Tree Lover Police : ಗಿಡನೆಟ್ಟು ಸರಳವಾಗಿ ಹುಟ್ಟುಹಬ್ಬ ಆಚರಣೆ : ಕರಾವಳಿಯಲ್ಲಿ ವೃಕ್ಷ ಪ್ರೇಮಿ ಪೊಲೀಸ್‌ ಅಧಿಕಾರಿ

ಕುಂದಾಪುರ : ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸೊದಕ್ಕೆ ಎಲ್ಲರೂ ಇಷ್ಟ ಪಡ್ತಾರೆ. ಅದ್ರಲ್ಲೂ ಅಧಿಕಾರಿಗಳ ಹುಟ್ಟುಹಬ್ಬ ಬೇಡಾ ಅಂದ್ರೂ ಅದ್ದೂರಿಯಾಗಿಯೇ ನಡೆದು ಹೋಗುತ್ತೆ. ಆದ್ರೆ ಇಲ್ಲೋರ್ವ ಪೊಲೀಸ್‌ ಅಧಿಕಾರಿ ಮಾತ್ರ ಎಲ್ಲರಿಗಿಂತಲೂ ವಿಭಿನ್ನ. ವರ್ಷಂಪ್ರತಿ ಗಿಡನೆಟ್ಟು (tree lover police) ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಹಲವು ವರ್ಷಗಳಿಂದಲೂ ಈ ಕಾಯಕ ಮುಂದುವರಿದಿದೆ. ಅಷ್ಟಕ್ಕೂ ಇವರು ಬೇರಾರೂ ಅಲ್ಲಾ ಗಂಗೊಳ್ಳಿಯ ಠಾಣಾಧಿಕಾರಿ ನಂಜಾ ನಾಯ್ಕ ಎನ್.

ಹೌದು. ನಂಜಾ ನಾಯ್ಕ ಅವರ ಹುಟ್ಟೂರು ಕಾಫಿನಾಡು ಚಿಕ್ಕಮಗಳೂರು. ಬಾಲ್ಯವನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದಲ್ಲಿ ಕಳೆದಿದ್ದ ನಂಜಾ ನಾಯ್ಕ ಅವರಿಗೆ ಬಾಲ್ಯದಿಂದಲೇ ಪರಿಸರ ಪ್ರೇಮ ಹುಟ್ಟುಕೊಂಡಿತ್ತು. ಕಳಸಾಪುರದಿಂದ ಸಖರಾಯಪಟ್ಟಣಕ್ಕೆ ಶಿಫ್ಟ್‌ ಆದ ನಂತರೂ ಗಿಡಗಳನ್ನು ನೆಡುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದರು. ಸದ್ಯ ಪೊಲೀಸ್‌ ಅಧಿಕಾರಿಯಾಗಿ ಜನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಂಜಾ ನಾಯ್ಕ ಅವರು ತಮ್ಮ ಹುಟ್ಟುಹಬ್ಬವನ್ನು ಇದುವರೆಗೂ ಅದ್ದೂರಿಯಾಗಿ ಆಚರಿಸಿದ್ದೇ ಇಲ್ಲವಂತೆ. ಕೇಕ್‌ ಕತ್ತರಿಸುವ ಬದಲು ವರ್ಷಂಪ್ರತಿ ಗಿಡಗಳನ್ನು ನೆಡುವ ಕಾಯಕ ವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಗಿಡಗಳನ್ನು ನೆಡುವುದನ್ನು ರೂಢಿಸಿಕೊಂಡ್ರೆ ಆ ಮೂಲಕ ನಾಡು ಸಮೃದ್ದವಾಗುತ್ತೆ ಅನ್ನುತ್ತಾರೆ ನಂಜಾ ನಾಯ್ಕ.

ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರೊಬೆಷನರಿ ಎಸ್‌ಐ ಆಗಿ ತಮ್ಮ ಪೊಲೀಸ್‌ ಸೇವೆಯನ್ನು ಆರಂಭಿಸಿದ್ದ ನಂಜಾ ನಾಯ್ಕ ಅವರು, ನಂತರ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ನಂತರದಲ್ಲಿ ಶಿರಸಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಬಳಿಕ ಗಂಗೊಳ್ಳಿ ಠಾಣೆಯ ಪಿಎಸ್‌ಐ ಆಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆಗೆ ಸೇರಿದ ನಂತರದಲ್ಲಿಯೂ ನಂಜಾ ನಾಯ್ಕ ಅವರು ತಮ್ಮ ಗಿಡ ನೆಡುವ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಶಿರಸಿಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಈಗಾಗಲೇ ನಂಜಾ ನಾಯ್ಕ ಅವರು ನೆಟ್ಟ ಸಾವಿರಾರು ಗಿಡಗಳು ಇದೀಗ ಮರವಾಗಿ ಬೆಳೆದು ನಿಂತಿವೆ. ಕೇವಲ ಹುಟ್ಟುಹಬ್ಬ ಮಾತ್ರವಲ್ಲ ಪೊಲೀಸ್‌ ಠಾಣೆಯಲ್ಲಿನ ಕಾರ್ಯಕ್ರಮವಿರಲಿ, ಇಲ್ಲಾ ವೈಯಕ್ತಿಕ ಕಾರ್ಯಕ್ರಮವೇ ಇರಲಿ, ನಂಜಾ ನಾಯ್ಕ ಅವರು ಸ್ಮರಣಿ, ಹೂ, ಹಾರದ ಬದಲು ಅತಿಥಿಗಳಿಗೆ ಗಿಡಗಳನ್ನೇ ನೀಡುವ ಕಾಯಕ ಮಾಡುತ್ತಿದ್ದಾರೆ. ತನ್ನಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಗಿಡನೆಡುವ ಕಾಯಕ ಮಾಡಲು ಪ್ರೇರಣೆ ತನ್ನ ತಾಯಿ ಎಂದು ಹೇಳುವ ಪೊಲೀಸ್‌ ಅಧಿಕಾರಿ ನಂಜಾ ನಾಯ್ಕ ಅವರು ನಿಜಕ್ಕೂ ಇತರರಿಗೆ ಮಾದರಿ.

ಇದನ್ನೂ ಓದಿ : ಹೆಣ್ಣು ಮಗುವಿಗೆ ಜನ್ಮ ನೀಡಿದ 10 ನೇ ತರಗತಿ ವಿದ್ಯಾರ್ಥಿನಿ !

ಇದನ್ನೂ ಓದಿ : ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಆಸಿಡ್‌ ಎರಚಿದ 2 ಮಕ್ಕಳ ತಾಯಿ

ಪರಿಸರ ದಿನಾಚರಣೆಯ ಹೊತ್ತಲ್ಲಿ ಮಾತ್ರವೇ ಪರಿಸರ ಕಾಳಜಿ ಮೆರೆಯೋ ಇಂದಿನ ಕಾಲದಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದರೂ ಕೂಡ ಪರಿಸರ ಪ್ರೇಮವನ್ನು ಮೆರೆಯುತ್ತಿರುವ ನಂಜಾ ನಾಯ್ಕ ಅವರ ಕಾರ್ಯಕ್ಕೆ ನಿಜಕ್ಕೂ ಮೆಚ್ಚುಗೆ ಸೂಚಿಸಲೇ ಬೇಕು. ಇವರ ಈ ಕಾರ್ಯ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲಿ. ಇವರನ್ನು ನೋಡಿದ ಮೇಲಾದ್ರೂ ಇತರರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಲಿ ಅನ್ನೋದೇ ನಮ್ಮ ಆಶಯ.

( A tree lover police officer Nanja Naik Gangolli psi )

Comments are closed.