ರಾಜ್ಯ ಸರ್ಕಾರದ ಕೊರೋನಾ ನಿರ್ವಹಣೆಯ ವಿರುದ್ಧ ಸದಾ ಟೀಕಿಸುತ್ತಿದ್ದ ಕಾಂಗ್ರೆಸ್ ಕೊನೆಗೂ ಸಹಾಯದ ಜೊತೆ ಸರ್ಕಾರಕ್ಕೆ ಬಲ ತುಂಬಲು ಮುಂದಾಗಿದೆ. ಕೋವಿಡ್ ಲಸಿಕೆ ಖರೀದಿಗಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಧನಸಹಾಯವನ್ನು ಕಾಂಗ್ರೆಸ್ ವತಿಯಿಂದ ನೀಡಲು ನಿರ್ಧರಿಸಿದೆ.

ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಜೊತೆ ಜಂಟಿ ಸುದ್ಧಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಸಂಗತಿಯನ್ನು ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ಸೇರಿದಂತೆ ಒಟ್ಟು 100 ಕೋಟಿ ರೂಪಾಯಿಯನ್ನು ಲಸಿಕೆ ಖರೀದಿಸಲು ರಾಜ್ಯ ಸರ್ಕಾರಕ್ಕೆ ನೀಡಲು ಮುಂದಾಗಿದೆ.

ವಿಧಾನಸಭೆ, ವಿಧಾನಪರಿಷತ್,ಸಂಸದರು,ರಾಜ್ಯಸಭೆ ಸೇರಿದಂತೆ ಎಲ್ಲರೂ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 1ಕೋಟಿ ರೂಪಾಯಿ ಬಿಟ್ಟು ಕೊಡಲಿದ್ದು, ಉಳಿದ ಹಣವನ್ನು ಕೆಪಿಸಿಸಿ ಭರಿಸಲಿದೆ ಎಂದು ಡಿಕೆಶಿ ವಿವರಣೆ ನೀಡಿದ್ದಾರೆ.

ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ ದೇಶದಲ್ಲಿ ಕರೋನಾ ಸಮಸ್ಯೆ ಕಾಡುತ್ತಿದೆ. ಆದರೆ ಪ್ರಧಾನಿ ಮೋದಿ ಎಲ್ಲಿದ್ದಾರೋ ಗೊತ್ತಿಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಪಾರದರ್ಶಕವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.
