ಬೆಂಗಳೂರು : ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಪ್ರಯಾಣಿಕರು ಮನೆಯಿಂದ ಹೊರ ಬರುವುದಕ್ಕೆ ಅಂಜುತ್ತಿದ್ದಾರೆ. ಹೀಗಾಗಿ ಬಿಎಂಟಿಸಿ ಬಸ್ಸುಗಳು ಖಾಲಿ ಖಾಲಿಯಾಗಿ ಸಂಚರಿಸುತ್ತಿದ್ದು, ಬಿಎಂಟಿಸಿಗೆ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲೀಗ 222 ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ಬಿಎಂಟಿಸಿ ನಿರ್ಧರಿಸಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಒಟ್ಟು 4,500 ಬಸ್ಸುಗಳು ನಗರದಾದ್ಯಂತ ಸಂಚಾರ ನಡೆಸುತ್ತಿವೆ. ಆದರೆ ಬೆಂಗಳೂರಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಜನರು ಬಸ್ಸುಗಳಲ್ಲಿ ಸಂಚರಿಸುತ್ತಿಲ್ಲ. ಅದ್ರಲ್ಲೂ ಬೆಂಗಳೂರು ಪಶ್ಚಿಮ, ಈಶಾನ್ಯ, ದಕ್ಷಿಣ ಹಾಗೂ ಉತ್ತರ ವಲಯಗಳಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದೆ.

ಇದು ಜನರನ್ನು ಆತಂಕಕ್ಕೀಡು ಮಾಡಿದ್ದು, ಈ ವಲಯಗಳಲ್ಲಿನ ಬಸ್ಸುಗಳು ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿ ಓಡಾಡುತ್ತಿವೆ. ಈ ಹಿನ್ನೆಲೆಯಲ್ಲಿ 222 ಮಾರ್ಗಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ಬಿಎಂಟಿಸಿ ಹೇಳಿದೆ.