ಮುಂಬೈ ಜೊತೆಗೆ ಉಡುಪಿ-ದ.ಕ. ಜಿಲ್ಲೆಗೆ ಬೆಂಗಳೂರು ಕಂಟಕ !

0

ಉಡುಪಿ : ಕರಾವಳಿಯ ಜಿಲ್ಲೆಗಳು ಕೊರೊನಾ ಮಹಾಮಾರಿಗೆ ತತ್ತರಿಸಿವೆ. ಇಷ್ಟು ದಿನ ಮಹಾರಾಷ್ಟ್ರ ಹಾಗೂ ವಿದೇಶದಿಂದ ಬಂದವರಿಂದಲೇ ಕರಾವಳಿಯಲ್ಲಿ ಕೊರೊನಾ ಸೋಂಕು ಆರ್ಭಟಿಸಿತ್ತು. ಇದೀಗ ಬೆಂಗಳೂರು ಕರಾವಳಿಯ ಪಾಲಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆಯೇ ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆ ಕಂಡುಕೊಂಡಿದ್ದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜನರು ತಮ್ಮೂರಿನತ್ತ ಮುಖಮಾಡಿದ್ದರು. ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮಗಳನ್ನುಕೈಗೊಂಡಿದ್ದರೂ ಕೂಡ ಮುಂಬೈನಿಂದ ಆಗಮಿಸಿದ್ದ ಶೇ.20ರಷ್ಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಜೊತೆಗೆ ಅರಬ್ ರಾಷ್ಟ್ರಗಳಿಂದ ಆಗಮಿಸಿದವರಲ್ಲಿಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಮೂರು ಸಾವಿರದ ಅಂಚಿಗೆ ಬಂದು ನಿಂತಿದೆ.

ಉಡುಪಿ ಜಿಲ್ಲೆ ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲಿಯೇ 3ನೇ ಸ್ಥಾನದಲ್ಲಿದ್ರೆ ದಕ್ಷಿಣ ಕನ್ನಡ ಜಿಲ್ಲೆ 5 ಸ್ಥಾನಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ 1,361 ಮಂದಿ ಕೊರೊನಾ ಸೋಂಕಿತರಿದ್ದು, ಮೂರು ಮಂದಿಯನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1143 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಕೇವಲ 215 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಡೇಂಜರ್ ಜಿಲ್ಲೆಯಾಗಿ ಮಾರ್ಪಡುತ್ತಿದೆ.

ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕಳೆದೊಂದು ವಾರದಿಂದಲೂ ನಿತ್ಯವೂ ಶತಕದ ಗಡಿದಾಟುತ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,268 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ 24 ಮಂದಿ ಕೊರೊನಾ ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ. 624 ಮಂದಿ ಇದುವರೆಗೆ ಗುಣಮುಖರಾಗಿದ್ರೆ 620 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ ಕೊರೊನಾ ಮಹಾಮಾರಿ ಏರಿಕೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಪತ್ತೆಯಾಗುತ್ತಲೇ ಬೆಂಗಳೂರಲ್ಲಿ ನೆಲೆಸಿರುವ ಲಕ್ಷಾಂತರ ಮಂದಿ ಇದೀಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ವಾಪಾಸಾಗುತ್ತಿದ್ದಾರೆ. ಬೆಂಗಳೂರಿನಿಂದ ವಾಪಾಸಾಗುತ್ತಿರುವ ಹಲವರಿಗೆ ಕೊರೊನಾ ಸೋಂಕು ದೃಢಪಡುತ್ತಿದೆ. ಬೆಂಗಳೂರಿನಿಂದ ಊರಿಗೆ ಮರಳುವ ಮಂದಿ ಎರಡೂ ಜಿಲ್ಲೆಗಳಲ್ಲಿ ಓಡಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ಕರಾವಳಿಯ ಜಿಲ್ಲೆಗಳಲ್ಲಿ ಮತ್ತೊಮ್ಮೆ ಕೊರೊನಾ ಆತಂಕ ಶುರುವಾಗಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಂಗಳೂರಿನಿಂದ ವಾಪಾಸಾಗುತ್ತಿರುವವರಿಗೆ ಕೊರೊನಾ ತಪಾಸಣೆಯನ್ನು ನಡೆಸಬೇಕು. ಅಲ್ಲದೇ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಬೇಕೆಂಬ ಕೂಗು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚರವಹಿಸದೇ ಇದ್ರೆ ಕರಾವಳಿಯ ಜಿಲ್ಲೆಗಳು ಶೀಘ್ರದಲ್ಲಿಯೇ ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಡುವ ಸಾಧ್ಯತೆಯಿದೆ.

Leave A Reply

Your email address will not be published.