ಮಂಗಳೂರು : ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಈ ನಡುವಲ್ಲೇ ದುಬೈನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ ರೂಪಾಂತರಿ ಇಟಾ ವೈರಸ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲೀಗ ಆತಂಕ ಶುರುವಾಗಿದೆ.
ನಾಲ್ಕು ದಿನಗಳ ಹಿಂದೆ ದುಬೈನಿಂದ ತಾಯ್ನಾಡಿಗೆ ವಾಪಾಸಾಗಿದ್ದ ಮೂಡಬಿದಿರೆ ಮೂಲದ ವ್ಯಕ್ತಿಯಲ್ಲಿ ಇಟಾ ರೂಪಾಂತರಿ ವೈರಸ್ ಇರುವುದು ಜಿನೋಮಿಕ್ ಅಧ್ಯಯನದಿಂದಾಗಿ ಪತ್ತೆಯಾಗಿದೆ. ಆದರೆ ವ್ಯಕ್ತಿ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.
ವ್ಯಕ್ತಿಯ ಸಂಪರ್ಕಕಕ್ಕೆ ಬಂದಿದ್ದ ಸುಮಾರು 120ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದೃಷ್ಟವಶಾತ್ ಯಾರೂ ಕೂಡ ಸೋಂಕಿಗೆ ತುತ್ತಾಗಿಲ್ಲ ಎಂದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಕೊರೋನಾ ಸೋಂಕಿತ ವ್ಯಕ್ತಿಯ ಮಾದರಿಯನ್ನು ಜಿನೋಮಿಕ್ ಪರೀಕ್ಷೆಗೂ ಕಳುಹಿಸಲಾಗಿತ್ತು. ಆ ವ್ಯಕ್ತಿಯಲ್ಲಿ ಇಟಾ ರೂಪಾಂತರಿ ಸೋಂಕು ಇರೋದು ಪತ್ತೆಯಾಗಿದೆ. ಆದ್ರೇ ಕೊರೋನಾದಿಂದ ಗುಣಮುಖರಾದ ನಂತ್ರ, ಅವರು ಮರಳಿ ದುಬೈಗೆ ತೆರಳಿದ್ದಾರೆ ಎಂದು ಡಾ. ಕಿಶೋರ್ ಕುಮಾರ್ ಹೇಳಿದ್ದಾರೆ.
ಇಟಾ ರೂಪಾಂತರಿ ಮೊದಲು ಇಂಗ್ಲೆಂಡ್ ನಲ್ಲಿ ಪತ್ತೆಯಾಗಿತ್ತು. ಬಳಿಕ ಇದು ಅಲ್ಲಲ್ಲಿ ಪತ್ತೆಯಾಗಿದ್ದು ಬಿಟ್ಟರೆ, ಡೆಲ್ಟಾ ರೀತಿ ವ್ಯಾಪಕವಾಗಿರಲಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೂಪಾಂತರಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಆಂತಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.