ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ 4.0 ಜಾರಿಯಲ್ಲಿದೆ. ಆದರೆ ರಾಜ್ಯ ಸರಕಾರ ಲಾಕ್ ಡೌನ್ ಆದೇಶವನ್ನು ಸಡಿಲಗೊಳಿಸಿದ್ದು, ಸಾರಿಗೆ, ರೈಲು ಸಂಚಾರ, ಐಟಿ-ಬಿಟಿ, ಸೆಲೂನ್ ಸೇರಿದಂತೆ ಬಹುತೇಕ ಸೇವೆಗಳನ್ನು ಆರಂಭಿಸಿದೆ. ಆದ್ರೆ ಹೋಟೆಲ್ ಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ. ಹೀಗಾಗಿ ಹೋಟೆಲ್ ಕಾರ್ಮಿಕರು ಹಾಗೂ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಲೇ ಲಾಕ್ ಡೌನ್ ಆದೇಶ ಹೇರಲಾಗಿತ್ತು. ಆದ್ರೆ ದಿನ ಕಳೆಯುತ್ತಿದ್ದಂತೆ ಒಂದೊಂದೆ ಉದ್ಯಮವನ್ನು ರಾಜ್ಯ ಸರಕಾರ ಆರಂಭಿಸಲು ಅವಕಾಶವನ್ನು ಕಲ್ಪಿಸಿದೆ. ಆದ್ರೀಗ ಲಾಕ್ ಡೌನ್ 4.0 ಆದೇಶ ಜಾರಿಯಾದ್ರೂ ಕೂಡ ರಾಜ್ಯದಲ್ಲಿ ಬಹುತೇಕ ಸೇವೆಗಳು ಇಂದಿನಿಂದ ಆರಂಭಗೊಳ್ಳಲಿವೆ. ಇದರಿಂದಾಗಿ ದುಡಿಮೆಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ.


ಆದರೆ ಪುನರಾರಂಭದ ನಿರೀಕ್ಷೆಯಲ್ಲಿದ್ದ ಹೋಟೆಲ್ ಮಾಲೀಕರು ಹಾಗೂ ಕಾರ್ಮಿಕರು ಮಾತ್ರ ನಿರಾಸೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಹೋಟೆಲ್ ಉದ್ಯಮವನ್ನೇ ನೆಚ್ಚಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಕಳೆದರಡು ತಿಂಗಳಿನಿಂದಲೂ ಹೋಟೆಲ್ ಕಾರ್ಮಿಕರು ದುಡಿಮೆಯಿಲ್ಲದೇ ನಿತ್ಯದ ತುತ್ತಿಗೂ ಪರದಾಡುವ ಸ್ಥಿತಿಯಲ್ಲಿದ್ರೆ, ಹೋಟೆಲ್ ಮಾಲೀಕರು ಕೂಡ ವ್ಯವಹಾರವಿಲ್ಲದೇ ಕಾರ್ಮಿಕರಿಗೆ ವೇತನ ಪಾವತಿಸಲಾಗದೆ, ಬ್ಯಾಂಕ್ ಸಾಲ ಹೇಗೆ ತೀರಿಸುವುದು ಅನ್ನೋ ಆತಂಕಕ್ಕೆ ಸಿಲುಕಿದ್ದಾರೆ.

ರಾಜ್ಯ ಸರಕಾರ ರೈತರು, ಚಾಲಕರು, ಕಾರ್ಮಿಕರು, ಕ್ಷೌರಿಕರು, ನೇಕಾರರು ಸೇರಿದಂತೆ ಬಹುತೇಕರಿಗೆ ವಲಯಗಳಿಗೆ ತಲಾ 5,000 ರೂಪಾಯಿ ಸಹಾಯಧನ ಘೋಷಣೆ ಮಾಡಿದೆ. ಆದರೆ ಹೋಟೆಲ್ ಹಾಗೂ ಕ್ಯಾಟರಿಂಗ್ ವ್ಯವಹಾರವನ್ನೇ ನೆಚ್ಚಿಕೊಂಡಿದ್ದ ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ರಾಜ್ಯ ಸರಕಾರ ಸಹಾಯ ಹಸ್ತಚಾಚಿಲ್ಲ. ಇನ್ನು ರಾಜ್ಯ ಸರಕಾರದ ಮಾರ್ಗಸೂಚಿಯಂತೆಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೊರೊನಾ ಸೋಂಕು ನಿಯಂತ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೇ ಮಾಡಿಕೊಳ್ಳುತ್ತೇವೆ.

ನಮಗೆ ಕನಿಷ್ಟ ಸಣ್ಣ ಹಾಗೂ ಮದ್ಯಮ ಗಾತ್ರದ ಹೋಟೆಲ್ ಗಳನ್ನು ಆರಂಭಿಸಲು ಅವಕಾಶವನ್ನಾದ್ರೂ ಕಲ್ಪಿಸುವಂತೆ ಹೋಟೆಲ್ ಮಾಲೀಕರು ಸರಕಾರಕ್ಕೆ ಈಗಾಗಲೇ ಮನವಿ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ತಮ್ಮ ಮನವಿಗೆ ಸ್ಪಂಧಿಸಿಲ್ಲಾ ಅಂತಾ ಹೋಟೆಲ್ ಮಾಲೀಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಸರಕಾರ ಇದೀಗ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭಿಸಿದ್ದು, ರೈಲು ಸಂಚಾರಕ್ಕೂ ಅವಕಾಶ ಕಲ್ಪಿಸಿದೆ. ಮಾತ್ರವಲ್ಲ ಸೆಲೂನ್ ಹಾಗೂ ಬ್ಯೂಟಿ ಪಾರ್ಲರ್ ಓಪನ್ ಮಾಡುವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸಾಲದಕ್ಕೆ ಐಟಿ ಕಂಪೆನಿಗಳು ಕೂಡ ಕಾರ್ಯನಿರ್ವಹಿಸಬಹುದು ಎಂದಿದೆ. ಬಾರ್ ಗಳಲ್ಲಿ ಮದ್ಯ ಮಾರಾಟಕ್ಕೂ ಅವಕಾಶವನ್ನು ಕಲ್ಪಿಸಿದೆ. ಇವುಗಳಿಂದಲೇ ಕೊರೊನಾ ಸೋಂಕು ಹರಡುವ ಸಾಧ್ಯತೆಗಳೇ ಹೆಚ್ಚು, ಅಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಆದರೆ ಹೋಟೆಲ್ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಗ್ರಾಹಕರಿಗೆ ಸೆಲ್ಪ್ ಸರ್ವಿಸ್ ಸೇವೆಯನ್ನು ಒದಗಿಸೋದಕ್ಕೆ ಆದ್ರೂ ಅವಕಾಶ ಕೊಡಬೇಕು ಅಂತಾ ಹೋಟೆಲ್ ಮಾಲೀಕರು ಹಾಗೂ ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.

ನಿಜಕ್ಕೂ ಹೋಟೆಲ್ ಕಾರ್ಮಿಕರು ಹಾಗೂ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಹೀಗೆ ಮುಂದುವರಿದ್ರೆ ಹೋಟೆಲ್ ಉದ್ಯಮ ರಾಜ್ಯದಲ್ಲಿ ನೆಲಕಚ್ಚುವುದು ಗ್ಯಾರಂಟಿ. ಹೀಗಾದ್ರೆ ಹೋಟೆಲ್ ಉದ್ಯಮವನ್ನು ನಂಬಿಕೊಂಡಿದ್ದ ಲಕ್ಷಾಂತರ ಕುಟುಂಬಗಳ ಬದುಕು ಬೀದಿಗೆ ಬೀಳಲಿದೆ.

ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಗಂಭೀರವಾದ ಚಿಂತನೆಯನ್ನು ನಡೆಸಬೇಕಾದ ಅಗತ್ಯವಿದೆ. ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಹೋಟೆಲ್ ಕಾರ್ಮಿಕರು ಹಾಗೂ ಮಾಲೀಕರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಮಾಡಬೇಕಿದೆ.