ದ.ಕ.ದಲ್ಲಿ ಇಬ್ಬರು, ಉಡುಪಿಯಲ್ಲಿ ಒಬ್ಬರಿಗೆ ಕೊರೊನಾ : ಒಂದೇ ದಿನ ರಾಜ್ಯದಲ್ಲಿ 99 ಮಂದಿಗೆ ಸೋಂಕು ದೃಢ

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಕರ್ನಾಟಕಕ್ಕೆ ಶಾಕ್ ಕೊಟ್ಟಿದೆ. ಒಂದೇ ದಿನ ಬರೋಬ್ಬರಿ 99 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 1246ಕ್ಕೆ ಏರಿಕೆಯಾಗಿದ್ದು, ರಾಜ್ಯದಾದ್ಯಂತ ಆತಂಕ ಶುರುವಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 24 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಂಡ್ಯದಲ್ಲಿ 17, ಕಲಬುರಗಿ 11, ಉತ್ತರ ಕನ್ನಡ 8, ರಾಯಚೂರು 6, ಗದಗ 5, ಯಾದಗಿರಿ 5, ವಿಜಯಪುರ 5, ಹಾಸನ 4, ಕೊಪ್ಪಳ 3, ಬೆಳಗಾವಿ 2, ದಕ್ಷಿಣ ಕನ್ನಡ 2, ಉಡುಪಿ, ಮೈಸೂರು, ದಾವಣಗೆರೆ, ಬೀದರ್, ಕೊಡಗು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.


ಇಂದು ಬೆಳಗ್ಗೆಯ ಹೆಲ್ತ್ ಬುಲೆಟಿನ್ ನಲ್ಲಿ 84 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದ್ರೆ ಸಂಜೆಯ ವೇಳೆಗೆ ಈ ಸಂಖ್ಯೆ 99ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲ ಮಾಡಿದ ಬೆನ್ನಲ್ಲೇ ಕೊರೊನಾ ಸೋಂಕು ಏರಿಕೆಯಾಗುತ್ತಿರೋದು ಆತಂಕವನ್ನು ಮೂಡಿಸಿದೆ.

ಉ.ಕ 8, ದ.ಕ. 2, ಉಡುಪಿ 1 ಸೋಂಕು :

ಕರಾವಳಿ ಜಿಲ್ಲೆಗಳಾಗಿರುವ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 8 ಮಂದಿಗೆ ಕೊರೊನಾ ಸೋಂಕು ವ್ಯಾಪಿಸಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಗ್ರೀನ್ ಝೋನ್ ನಲ್ಲಿರುವ ಉಡುಪಿಯಲ್ಲಿ ಇಂದೂ ಕೂಡ ಮತ್ತೊಂದು ಕೊರೊನಾ ಸೋಂಕು ಪತ್ತೆಯಾಗಿದ್ದು, ಬಹುತೇಕರು ಮುಂಬೈನಿಂದ ವಾಪಾಸಾದವರೇ ಆಗಿದ್ದಾರೆ.

Leave A Reply

Your email address will not be published.