ಬೆಂಗಳೂರು : ಕರ್ನಾಟಕದಲ್ಲಿ ಲಾಕ್‌ಡೌನ್ ಹೇರಿಕೆಯಾಗುತ್ತಾ. ನೈಟ್ ಕರ್ಪ್ಯೂ ಅವಧಿಯಲ್ಲಿ ವಿಸ್ತರಣೆಯ ಜೊತೆಗೆ ವೀಕೆಂಡ್ ಕರ್ಪ್ಯೂ ಕೊರೊನಾ ಸೋಂಕಿತ ಜಿಲ್ಲೆಗಳಲ್ಲಿ ಜಾರಿಯಾಗುತ್ತಾ ಅನ್ನೋ ಹಲವು ಪ್ರಶ್ನೆಗಳು ಜನರನ್ನು ಕಾಡುತ್ತಿದ್ದು, ಎಲ್ಲಾ ಗೊಂದಲಗಳಿಗೆ ಇಂದು ತೆರೆ ಬೀಳುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆಯಲಿದ್ದು, ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಯಿದೆ. ರಾಜ್ಯದಲ್ಲಿ ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಹೇರಿಕೆ ಮಾಡುವಂತೆ ಈಗಾಗಲೇ ತಜ್ಞರು ಶಿಫಾರಸ್ಸು ಮಾಡಿದ್ದಾರೆ. ನೈಟ್ ಕರ್ಪ್ಯೂ ಅವಧಿಯನ್ನು ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಜಾರಿ ಮಾಡಬೇಕು. ಬಸ್ಸುಗಳ ಸಂಚಾರದ ಅವಧಿಯಲ್ಲಿಯೂ ಕಡಿತಗೊಳಿಸುವ ಜೊತೆಗೆ ಕೈಗಾರಿಕೆ, ಕಾರ್ಖಾನೆ ಸಿಬ್ಬಂದಿಗಳ ಮೇಲೆಯೂ ಮಿತಿಯನ್ನು ನಿಗದಿಗೊಳಿಸಬೇಕು. ಮದುವೆ, ಅಂತ್ಯಸಂಸ್ಕಾರಗಳಿ, ಜನಸಂದಣಿಯ ಮಾರುಕಟ್ಟೆ ಬಂದ್ ಮಾಡುವಂತೆ ತಜ್ಞರು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಇದನ್ನೂ ಓದಿ : ಕೊರೊನಾ ಲಸಿಕೆ ಪಡೆದಿದ್ರು ಬಲಿ ಪಡೆದ ಡೆಲ್ಟಾ : ಮುಂಬೈನಲ್ಲಿ ಮಹಾಮಾರಿಗೆ ಮೊದಲ ಬಲಿ
ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆಯನ್ನು ನಡೆಸಿದೆ. ಅಗಸ್ಟ್ 15ರ ವರೆಗೆ ಕಾದು ನೋಡುವ ತಂತ್ರಕ್ಕೆ ರಾಜ್ಯ ಮುಂದಾಗಿತ್ತು. ಆದ್ರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇ.3ಕ್ಕಿಂತಲೂ ಹೆಚ್ಚಾಗಿದೆ. ಅದ್ರಲ್ಲೂ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣದಲ್ಲಿ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾರ್ಗ ಅನಿವಾರ್ಯವಾಗುತ್ತಿದೆ.
ಇನ್ನು ಸಿಲಿಕಾನ್ ಸಿಟಿಯಲ್ಲಿಯೂ ಕೊರೊನಾ ಸೋಂಕು ಆತಂಕವನ್ನು ಮೂಡಿಸಿದೆ. ಮಕ್ಕಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಂಡುಬರುತ್ತಿದೆ. ಇನ್ನೊಂದೆಡೆ ಯಲ್ಲಿ ಡೆಲ್ಟಾ ಸೋಂಕಿತರ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ. ಕೇರಳ, ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇರಿಸಲಾಗಿದೆ. ಅದ್ರಲ್ಲೂ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ.
ಇದನ್ನೂ ಓದಿ : ದ.ಕ 354, ಉಡುಪಿಯಲ್ಲಿ 159 ಮಕ್ಕಳಿಗೆ ಕೊರೊನಾ : ಕರಾವಳಿಯಲ್ಲಿ ಶುರುವಾಯ್ತು 3ನೇ ಅಲೆಯ ಆತಂಕ
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿದೆ. ಅದ್ರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಎರಡೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ವೀಕೆಂಡ್ ಕರ್ಪ್ಯೂ ಉಡುಪಿ ಜಿಲ್ಲೆಗೂ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಅಧಿಕಾರಿಗಳು, ಕೋವಿಡ್ ತಜ್ಞರ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್, ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್ ಕರ್ಪ್ಯೂ ವಿಸ್ತರಣೆಯ ಬಗ್ಗೆಯೂ ಚರ್ಚೆ ನಡೆಯಲಿದೆ. ಅಗಸ್ಟ್ ಕೊನೆಯ ವಾರದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ರಾಜ್ಯ ಸರಕಾರ ಈಗಾಗಲೇ ಘೋಷಣೆಯನ್ನು ಮಾಡಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಮಕ್ಕಳನ್ನು ಕಾಡುತ್ತಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಶಾಲಾರಂಭದ ಕುರಿತು ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.