Mangalore : ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಕೊಟ್ಟ ಕೊರೊನಾ : ಮಕ್ಕಳನ್ನು ಕಾಲೇಜಿಗೆ ದಾಖಲಿಸಲು ಪೋಷಕರ ಹಿಂದೇಟು

ಮಂಗಳೂರು : ಕಳೆದೆರಡು ವರ್ಷಗಳಿಂದಲೂ ಕೊರೊನಾ ಹೆಮ್ಮಾರಿ ರೌದ್ರನರ್ತನ ಮೆರೆಯುತ್ತಿದೆ. ಅದ್ರಲ್ಲೂ ಕೊರೊನಾ ವೈರಸ್‌ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಬಾರೀ ಹೊಡೆತ ಕೊಟ್ಟಿದೆ. ಇದೀಗ ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದ್ದು, ಹೊರ ಜಿಲ್ಲೆಗಳ ಪೋಷಕರು ತಮ್ಮ ಮಕ್ಕಳನ್ನು ಮಂಗಳೂರು ಹಾಗೂ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳಿಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೇರಳದ ಗಡಿ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ದಿ ಕಂಡಿದೆ. ಇಲ್ಲಿರುವ ಹತ್ತಾರು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಪಡೆಯಲು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ವರ್ಷವೂ ಲಕ್ಷಾಂತರ ವಿದ್ಯಾರ್ಥಿಗಳು ಮಂಗಳೂರು ಹಾಗೂ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುತ್ತಿದ್ದರು. ಆದರೆ ಈ ಬಾರಿ ಹೆಚ್ಚುತ್ತಿರುವ ಕೊರೊನಾ ಸೋಂಕು ಶಿಕ್ಷಣ ಸಂಸ್ಥೆಗಳಿಗೆ ಬಾರೀ ಹೊಡೆತವನ್ನೇ ಕೊಟ್ಟಿದೆ.

ಕರಾವಳಿ ಭಾಗದಲ್ಲಿನ ಶಿಕ್ಷಣ ಸಂಸ್ಥೆಗಳು ದಾಖಲಾತಿಯಿಂದ ಹಿಡಿದು, ಫಲಿತಾಂಶದ ವರೆಗೂ ಪೈಪೋಟಿಯನ್ನು ನಡೆಸುತ್ತಿವೆ. ದುಬಾರಿ ಶುಲ್ಕವನ್ನು ಪಡೆದು ಶಿಕ್ಷಣ ನೀಡುವ ಕಾರ್ಯ ವನ್ನು ಹಲವು ವರ್ಷಗಳಿಂದಲೂ ನಡೆಸುತ್ತಿವೆ. ಆದರೆ ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀರಾ ಕಡಿಮೆಯಾಗುತ್ತಿದೆ. ಅದ್ರಲ್ಲೂ ಈ ಬಾರಿ ಕೇರಳದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹೆಚ್ಚುತ್ತಿದ್ದು, ಕೇರಳಿಗರಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕೇರಳದಿಂದ ವಿದ್ಯಾಭ್ಯಾಸಕ್ಕಾಗಿ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ ಯಾಗಿದೆ. ಅಲ್ಲದೇ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದ ವಿದ್ಯಾರ್ಥಿಗಳು ತಮ್ಮ ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ದ.ಕ 354, ಉಡುಪಿಯಲ್ಲಿ 159 ಮಕ್ಕಳಿಗೆ ಕೊರೊನಾ : ಕರಾವಳಿಯಲ್ಲಿ ಶುರುವಾಯ್ತು 3ನೇ ಅಲೆಯ ಆತಂಕ

ಇನ್ನು ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ರಾಯಚೂರು ಸೇರಿದಂತೆ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನರು ಮಂಗಳೂರಿನ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ತಮ್ಮೂರಿನಲ್ಲಿರುವ ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸಲು ಮುಂದಾಗಿದ್ದಾರೆ. ಕಳೆದ ಬಾರಿ ಆನ್‌ಲೈನ್‌ ಮಾದರಿಯಲ್ಲಿ ಶಿಕ್ಷಣವನ್ನು ನೀಡಲಾಗಿದ್ದು, ಈ ಬಾರಿ ಭೌತಿಕ ತರಗತಿಗಳು ಆರಂಭಗೊಳ್ಳುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಬಂದ್ರೆ ಯಾವುದೇ ಸಮಸ್ಯೆಯಿಲ್ಲ. ಒಂದೊಮ್ಮೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ್ರೆ, ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಯಾದ್ರೆ ಏನು ಮಾಡೋದು ಅನ್ನೋ ಚಿಂತೆ ಇದೀಗ ಪೋಷಕರನ್ನು ಕಾಡುತ್ತಿದೆ. ಒಟ್ಟಿನಲ್ಲಿ ಕೊರೊನಾ ಹೆಮ್ಮಾರಿ ಇದೀಗ ಕರಾವಳಿ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಕೊಡಲಿಯೇಟು ನೀಡಿದ್ದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ : ಕರ್ನಾಟಕದಲ್ಲಿ ಜಾರಿಯಾಗುತ್ತಾ ಲಾಕ್‌ಡೌನ್‌ : ಇಂದು ಸಿಎಂ ಬೊಮ್ಮಾಯಿ ಮಹತ್ವದ ಸಭೆ

Comments are closed.