3rd Wave : 10 ದಿನಗಳಲ್ಲಿ 126 ಮಕ್ಕಳಿಗೆ ಒಕ್ಕರಿಸಿದ ಕೊರೊನಾ ಸೋಂಕು : ಶಾಲಾರಂಭದ ಹೊತ್ತಲೇ ಪೋಷಕರಲ್ಲಿ ಆತಂಕ

ಮಡಿಕೇರಿ : ಕರ್ನಾಟಕದಲ್ಲೀಗ ಕೊರೊನಾ ಮೂರನೇ ಅಲೆಯ ಆರ್ಭಟ ಶುರುವಾಗಿದೆ. ತಜ್ಞರು ಕೊರೊನಾ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇನ್ನೊಂದೆಡೆ ಶಾಲಾರಂಭಕ್ಕೂ ಸಿದ್ದತೆ ನಡೆಯುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 18 ವರ್ಷದೊಳಗಿನ 126 ಮಕ್ಕಳಿಗೆ ಕೊರೊನಾ ಸೋಂಕು ಒಕ್ಕರಿಸಿದೆ.

ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗದ ಜಿಲ್ಲೆಗಳಲ್ಲಿ ರಾಜ್ಯ ಸರಕಾರ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಅದ್ರಲ್ಲೂ 18 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅದ್ರಲ್ಲೂ ಕಳೆದ ಹತ್ತು ದಿನಗಳಲ್ಲಿ 126 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿರುವುದು ಪೋಷಕರಿಗೆ ಆತಂಕ ಮೂಡಿಸಿದೆ.

ಕೊಡಗಿನಲ್ಲಿ ಇದುವರೆಗೆ 32,498 ಪ್ರಕರಣ ದಾಖಲಾಗಿದ್ದು, ಇದುವರೆಗೆ ಒಟ್ಟು 31,487 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಕ್ಕಳಿಗೆ ಸೋಂಕು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಮಕ್ಕಳ ವೈದ್ಯರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಕೋವಿಡ್ ಪಾಸಿಟಿವಿಟಿ ದರ ಶೇ.2.54 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೂ ಕೂಡ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್‌ ಎಲ್ಲಾ ಮಕ್ಕಳು ಕೂಡ ಆರೋಗ್ಯವಾಗಿ ದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮಕ್ಕಳು ಹಾಗೂ ಪೋಷಕರನ್ನು ಕ್ವಾರಂಟೈನ್‌ಗೆ ಒಳಪಡಿಸಿ, ನಿಗಾ ಇರಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿರುವುದು ಮೂರನೇ ಅಲೆಯ ಭೀತಿಯನ್ನು ಹುಟ್ಟಿಸಿದೆ. ಶಾಲಾರಂಭಕ್ಕೆ ರಾಜ್ಯ ಸರಕಾರ ಸಜ್ಜಾಗಿರುವ ಹೊತ್ತಲ್ಲೇ ಇಷ್ಟು ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿರೋದು ಎಚ್ಚರಿಕೆಯ ಮುನ್ಸೂಚನೆಯನ್ನು ತೋರಿಸುತ್ತಿದೆ.

Comments are closed.