ಮೈಸೂರು : ಅರಮನೆ ನಗರಿ ಮೈಸೂರು ಕೋರೊನಾ ಸೋಂಕಿನ ಆರ್ಭಟಕ್ಕೆ ಬೆಚ್ಚಿಬಿದ್ದಿದೆ. ದಿನೇ ದಿನೇ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಈ ನಡುವಲ್ಲೇ ಕೊರೊನಾ ಸೋಂಕಿನ ಮರಣ ಪ್ರಮಾಣದಲ್ಲಿಯೂ ಮೈಸೂರು ರಾಜ್ಯದಲ್ಲಿಯೇ ಅಗ್ರಸ್ಥಾನಕ್ಕೆ ಏರಿರುವುದು ಆತಂಕವನ್ನು ಮೂಡಿಸಿದೆ.

ಜುಬಿಲಿಯೆಂಟ್ ಕಾರ್ಖಾನೆಯಿಂದ ಮೈಸೂರಿಗೆ ಕಾಲಿಟ್ಟ ಕೊರೊನಾ ವೈರಸ್ ಸೋಂಕು ಜಿಲ್ಲೆಯನ್ನೇ ತಲ್ಲಣಗೊಳಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಕೊರೊನಾ ವಿರುದ್ದದ ಹೋರಾಟದಲ್ಲಿ ಗೆಲುವವನ್ನು ಕಂಡಿದ್ದ ಅರಮನೆ ನಗರಿಯಲ್ಲೀಗ ಕೊರೊನಾ ಆರ್ಭಟ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯವೂ ಶತಕ, ದ್ವಿಶತಕ ದಾಖಲಿಸುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಬರೋಬ್ಬರಿ 2,450 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 99ಕ್ಕೆ ಏರಿಕೆಯಾಗಿದೆ. ಈ ಮೂಲಕ ಅರಮನೆ ನಗರಿ ಮೈಸೂರಿನಲ್ಲಿ ಸಾವಿನ ಪ್ರಮಾಣ ಶೇ.4.3ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ 542 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 19 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ ಮರಣ ಪ್ರಮಾಣದಲ್ಲಿ ಅರಮನೆ ನಗರಿ ಮೈಸೂರು ರಾಜ್ಯದಲ್ಲಿಯೇ ಅಗ್ರಸ್ಥಾನಕ್ಕೇರಿದೆ.

ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿನ ಕೊರೊನಾ ಸೋಂಕಿತರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜೊತೆ ಜೊತೆಗೆ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚಾಗಿ ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವುದರ ಜೊತೆ ಜೊತೆಗೆ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆಯೂ ವೃದ್ದಿಸುತ್ತಿರುವುದು ಮೈಸೂರಿನ ಜನರಿಗೆ ಆತಂಕ ಮೂಡಿಸಿದೆ.