“ಅಣ್ಣಾವ್ರಿಗೆ ಭಾರತರತ್ನ” ಪ್ರಧಾನಿ ಮೋದಿಗೆ ಕನ್ನಡಿಗರ ಮನವಿ

0

ಕನ್ನಡ ಚಿತ್ರರಂಗದ ಪಾಲಿಗೆ ವರನಟ ಡಾ.ರಾಜಕುಮಾರ್ ಅಚ್ಚಳಿಯದ ಹೆಸರು. ರಾಜ್ ಕುಮಾರ್ ಹೆಸರು ಕೇಳಿದ್ರೆ ಸಾಕು ಚಿತ್ರಪ್ರೇಮಿಗಳ ಮನಸ್ಸಲ್ಲಿ ಕನ್ನಡ ಪ್ರೇಮ ಜಾಗೃತಗೊಳ್ಳುತ್ತೆ. ಇಡೀ ವಿಶ್ವದ ಜನರು ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ್ದು ಇದೇ ರಾಜ್ ಅನ್ನೋ ನಟ ಸಾರ್ವಭೌಮ.

ಮುತ್ತುರಾಜ್ ಹುಟ್ಟಿದ್ದು ಚಾಮನಗರದ ಗಾಜನೂರು ಅನ್ನೋ ಹಳ್ಳಿಯಲ್ಲಿ ಆದರೆ ಸಾಧನೆಯ ಶಿಖರವೇರಿದ್ದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ. ಗಾಜನೂರಿನಲ್ಲಿ 4ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿದ್ದ ಮುತ್ತುರಾಜ್ ಅವರ ನಟನೆಯನ್ನು ಮೆಚ್ಚಿ ಕನ್ನಡ ಸಿನಿಮಾವೊಂದಕ್ಕೆ ಆಫರ್ ಬಂದಿತ್ತು. ಗಾಜನೂರಿನ ಮತ್ತುರಾಜ್ ಬೇಡರ ಕಣ್ಣಪ್ಪ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ರು. ಸಿನಿಮಾ ರಂಗಕ್ಕೆ ಬರುತ್ತಿದ್ದಂತೆಯೇ ಮುತ್ತುರಾಜ್ ರಾಜ್ ಕುಮಾರ್ ಆಗಿ ಬದಲಾದ್ರು.

ಬೇಡರ ಕಣ್ಣಪ್ಪ ಸಿನಿಮಾದ ನಂತರ ನಡೆದಿದ್ದು ಇತಿಹಾಸ. ಸಿನಿಮಾ ನಟರಾಗಿ, ನಿರ್ಮಾಪಕರಾಗಿ, ನಟನೆಯ ಜೊತೆಗೆ ಸಂಗೀತದ ಸುಧೆಯನ್ನು ಹರಿಸಿದವರು ಡಾ.ರಾಜ್ ಕುಮಾರ್, ಪಾರ್ವತಮ್ಮ ಅವರನ್ನು ಮದುವೆಯಾಗಿದ್ದ ಡಾ.ರಾಜ್ ಕುಮಾರ್ ದಂಪತಿಗಳಿಗೆ 5 ಮಂದಿ ಮಕ್ಕಳು. ಸಿನಿಮಾ ಚಟುವಟಿಕೆಯ ಹಿನ್ನೆಲೆಯಲ್ಲಿ ಆರಂಭದಲ್ಲಿ ಚೆನ್ನೈನಲ್ಲಿ ನೆಲೆಸಿದ್ದ ಡಾ.ರಾಜ್ ಕುಮಾರ್ ಅವರು, ಕನ್ನಡ ಚಿತ್ರರಂಗ ಗಾಂಧಿನಗರಕ್ಕೆ ಶಿಫ್ಟ್ ಆಗುತ್ತಲೇ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ರು. ತನ್ನಲ್ಲಿರುವ ಅದ್ಬುತ ನಟನೆಯಿಂದಲೇ ತಾನೊಬ್ಬ ಕಲಾವಿದ ಅನ್ನೋದನ್ನು ತನ್ನ ಚಿತ್ರಗಳ ಮೂಲಕ ಸಾಭೀತು ಪಡಿಸಿದ್ದಾರೆ. ಮಾತ್ರವಲ್ಲ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಡಾ.ರಾಜ್ ಕೊಟ್ಟ ಕೊಡುಗೆ ಅಪಾರ.

ಕೇವಲ 4ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿದ್ದರೂ ಕೂಡ ಡಾ.ರಾಜ್ ಕುಮಾರ್ ಅವರ ಸಾಧನೆಗೆ ವಿದ್ಯಾಭ್ಯಾಸ ತೊಡಕಾಗಲಿಲ್ಲ. ತನ್ನಲ್ಲಿದ್ದ ನಟನಾ ಕೌಶಲ್ಯದಿಂದಲೇ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ಡಾ.ರಾಜ್ ಕುಮಾರ್. ಕನ್ನಡ ಚಿತ್ರರಂಗವನ್ನು ದೇಶದಾದ್ಯಂತ ಪ್ರಖ್ಯಾತಿಗಳಿಸಿದವರು ಕೂಡ ವರನಟ ಡಾ.ರಾಜ್ ಕುಮಾರ್.

ಬಂಗಾರದ ಮನುಷ್ಯನಾಗಿ ಬದುಕಿದ್ದ ಡಾ.ರಾಜ್ ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ, ಆದರೆ ಕನ್ನಡಿಗರು ಅವರನ್ನ ಇಂದಿಗೂ ಅಣ್ಣಾವ್ರು, ಅಪ್ಪಾಜಿ ಅಂತಾ ಸಂಬೋಧಿಸುತ್ತಿದ್ದಾರೆ. ಕೋಟ್ಯಾಂತರ ಹೃದಯದಲ್ಲಿ ಅಣ್ಣಾವ್ರು ಚಿರಸ್ಥಾಯಿಯಾಗಿದ್ದಾರೆ.

ರಾಜ್ ಕುಮಾರ್ ಅವರ ಹುಟ್ಟು ಹಬ್ಬವೇ ಇರಲಿ, ಪುಣ್ಯತಿಥಿಯೇ ಇರಲಿ. ಇಂದಿಗೂ ಅಭಿಮಾನಿಗಳು ತಮ್ಮ ಮನೆಯ ಹಬ್ಬದಂತೆಯೇ ಆಚರಿಸುತ್ತಿದ್ದಾರೆ. ಅಣ್ಣಾವ್ರ ಪ್ರತೀ ಸಿನಿಮಾಗಳು ಜೀವನದ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು, ಅಣ್ಣಾವ್ರ ಸಿನಿಮಾದ ನೋಡಿದ ಅದೆಷ್ಟೋ ಮಂದಿ ಜೀವನದಲ್ಲಿ ಬದಲಾವಣೆಗಳನ್ನು ಕಂಡಿದ್ದಾರೆ.

ಬಡವರ ನೋವಿಗೆ ಧನಿಯಾಗುತ್ತಿದ್ದ ಅವರ ವ್ಯಕ್ತಿತ್ವ ಇಂದಿನ ಯುವ ಜನತೆಗೆ ಮಾದರಿಯಾಗಿ ಉಳಿದುಕೊಂಡಿದೆ. ಡಾ. ರಾಜ್​ಕುಮಾರ್ ಕಲಾಸೇವೆ ಮಾತ್ರಲ್ಲದೆ ಕನ್ನಡಕ್ಕಾಗಿ ಅವರು ಮಾಡಿದ ಹೋರಾಟ ಎಂದಿಗೂ ಮರೆಯಲಾರದ್ದು. ನಟ, ಗಾಯಕ, ಯೋಗಪಟು, ಚಿತ್ರನಿರ್ಮಾಣ ಎಲ್ಲದರಲ್ಲೂ ಡಾ. ರಾಜ್​ಕುಮಾರ್ ಮಾಡಿರುವ ಸಾಧನೆ ಬೆಟ್ಟದಷ್ಟು.

ಡಾ.ರಾಜ್ ಕುಮಾರ್ ಅವರ ಸಾಧನೆಗೆ ಈಗಾಗಲೇ ಪದ್ಮವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ , ಕರ್ನಾಟಕ ರತ್ನ, ಸೇರಿದಂತೆ ಅನೇಕ ಪ್ರಶಸ್ತಿಗಳು ಮುಡಿಗೇರಿವೆ. ಇದೀಗ ಅಣ್ಣಾವ್ರಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಮಾತ್ರವಲ್ಲ ರಾಜ್ಯ ಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಕೂಡ ಪ್ರಧಾನಿ ಮೋದಿ ಅವರಿಗೆ ಈ ಕುರಿತು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಾಗಲಿ, ನಿಜ ಜೀವನದಲ್ಲಾಗಲಿ ಎಂದಿಗೂ ಮದ್ಯಪಾನ, ಧೂಮಪಾನ ಸೇರಿದಂತೆ ಸಾಮಾಜ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ಕೊಟ್ಟವರೇ ಅಲ್ಲಾ. ಅಭಿಮಾನಿಗಳನ್ನು ದೇವರಂತೆ ಕಾಣುತ್ತಿದ್ದ ಅಣ್ಣಾವ್ರು ಸರಳ ವ್ಯಕ್ತಿತ್ವದಿಂದಾಗಿ ಅಸಂಖ್ಯಾತ ಕನ್ನಡಿಗರ ಪಾಲಿಗೆ ದೇವರಾಗಿ ನಿಂತಿದ್ದಾರೆ. ಡಾ.ರಾಜ್ ಕುಮಾರ್ ಅವರು ಜೀವನ ಸಾಧನೆಗಳನ್ನು ಮೋದಿ ಅವರಿಗೆ ತಿಳಿಸುವ ಕಾರ್ಯವನ್ನು ಚಂದ್ರಶೇಖರ್ ಅವರು ಮಾಡಿದ್ದು, ಭಾರತ ರತ್ನ ಅಣ್ಣಾವ್ರಾ ಮುಡಿಗೇರಲಿ ಅಂತಾ ಅಸಂಖ್ಯಾತ ಕನ್ನಡಿಗರು ಪ್ರಾರ್ಥಿಸುತ್ತಿದ್ದಾರೆ.

Leave A Reply

Your email address will not be published.