ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಸಾಮಾನ್ಯವಾಗಿ ಕೂಲ್ ಕೂಲ್ ಇರೋ ವ್ಯಕ್ತಿ. ಆದರೆ ಈಗ ಮಾತ್ರ ಅನಾರೋಗ್ಯದ ನಡುವೆಯೂ ಗರಂ ಆಗಿದ್ದು, ಸೈಬರ್ ಕ್ರೈಂ ಗೆ ದೂರು ನೀಡೋದಾಗಿ ಯೂಟ್ಯೂಬರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇಷ್ಟಕ್ಕೂ ಅರ್ಜುನ್ ಜನ್ಯ ಕೋಪಕ್ಕೆ ಕಾರಣವೇನು ಗೊತ್ತಾ ಇಲ್ಲಿದೆ ಡಿಟೇಲ್ಸ್.

ಸ್ಯಾಂಡಲ್ ವುಡ್ ನ ಪ್ರಸಿದ್ಧ ಮ್ಯೂಸಿಕ್ ಡೈರೈಕ್ಟರ್ ಅರ್ಜುನ್ ಜನ್ಯ ಕೊರೋನಾ ಸೋಂಕಿಗೆ ಒಳಗಾಗಿದ್ದು, ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹಿಂದಿನ ವರ್ಷ ಹೃದಯಾಘಾತಕ್ಕೆ ಒಳಗಾಗಿದ್ದ ಅರ್ಜುನ್ ಜನ್ಯ ಚೇತರಿಸಿಕೊಂಡು ತಮ್ಮ ಕರ್ತವ್ಯಕ್ಕೆ ಮರಳಿದ್ದರು.

ಇದೀಗ ಮತ್ತೆ ಕೊರೋನಾಕ್ಕೆ ತುತ್ತಾಗಿದ್ದಾರೆ. ಆದರೆ ಕೆಲ ಯೂಟ್ಯೂಬ್ ಚಾನೆಲ್ ಗಳು ಅರ್ಜುನ್ ಜನ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದಾರೆ. ಅಲ್ಲದೇ ಅರ್ಜುನ್ ಜನ್ಯ ಬೆಡ್ ಮೇಲೆ ಮಲಗಿದಂತೆ ಹಾಗೂ ಅವರ ಪತ್ನಿ ಕಣ್ಣಿರು ಹಾಕುತ್ತಿರುವಂತೆ ಪೋಟೋ ಎಡಿಟ್ ಮಾಡಿ ಹರಿಬಿಡುತ್ತಿದ್ದಾರೆ.

ಇದರ ವಿರುದ್ಧ ಅರ್ಜುನ್ ಜನ್ಯ ಕೆಂಡಾಮಂಡಲರಾಗಿದ್ದು, ಮಾಡೋದಾದರೇ ಬೇರೆಯವರಿಗೆ ಒಳ್ಳೆದು ಮಾಡಿ. ಶುಭಹಾರೈಸಿ. ಅದನ್ನು ಬಿಟ್ಟು ಈ ರೀತಿ ಮಾನಹಾನಿ ಮಾಡೋದು ಎಷ್ಟು ಸರಿ ಎಂದು ಪತ್ರ ಬರೆದು ಪ್ರಶ್ನಿಸಿದ್ದಾರೆ. ನನ್ನ ಆರೋಗ್ಯ ಸರಿಯಾಗಿದೆ. ಕೊರೋನಾ ಬಂದಿರೋದರಿಂದ ಮುಂಜಾಗ್ರತಾ ಕ್ರಮವಾಗಿ ಐಸೋಲೇಶನ್ ನಲ್ಲಿದ್ದೇನೆ. ಆದರೆ ಕೆಲವರು ಮನಬಂದಂತೆ ಸುದ್ದಿ ಹರಿಬಿಡುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ಸೈಬರ್ ಕ್ರೈಂನವರ ಗಮನಕ್ಕೆ ತಂದಿದ್ದೇನೆ. ಇನ್ನು ಇದೇ ರೀತಿ ಮುಂದುವರೆದರೇ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ವರ್ಷ ಹೃದಯಾಘಾತಕ್ಕೆ ಒಳಗಾದಾಗಲೇ ಸಾಕಷ್ಟು ರೂಮರ್ ಗಳು ಹಬ್ಬಿದ್ದು, ಈಗ ಮತ್ತೊಮ್ಮೆ ಕೊರೋನಾ ತಗುಲುತ್ತಿದ್ದಂತೆ ಸಾಕಷ್ಟು ಗಾಸಿಪ್ ಗಳು ಹುಟ್ಟಿಕೊಂಡಿದ್ದವು.