ಬೆಂಗಳೂರು : ಎಷ್ಟೇ ಕಾಳಜಿ ವಹಿಸಿದ್ದರೂ ಮತ್ತೆ ರಾಜ್ಯದಲ್ಲಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಸೋಂಕಿತರ ಪ್ರಮಾಣದಲ್ಲಿ ನಿಧಾನಕ್ಕೆ ಏರಿಕೆಯಾಗುತ್ತಿದೆ. ಜನರು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುತ್ತಿದ್ದು, ವಾಕ್ಸಿನ್ ಪಡೆಯುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತೊಮ್ಮೆ ಕರೋನಾ ತಡೆಗೆ ಕ್ಯಾಂಪೇನ್ ಮಾದರಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ (voice corona awarness ) ಹಮ್ಮಿಕೊಳ್ಳಲು ಮುಂದಾಗಿದೆ. ಶಿವಣ್ಣ, ಯಶ್, ಸುದೀಪ್ (Shivaraj kumar, Yash, Sudeep) ಅವರು ಧ್ವನಿಗೂಡಿಸಲಿದ್ದಾರೆ.
ಕೊರೋನಾ ಮೂರನೇ ಅಲೆಯ ಭೀತಿ ಎದುರಾಗಿದ್ದರೂ ಇನ್ನು ಲಕ್ಷಾಂತರ ಜನರು ಕೊರೋನಾ ಎರಡನೇ ಡೋಸ್ ಲಸಿಕೆ ಪಡೆಯದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಕೊರೋನಾ ಮತ್ತೊಮ್ಮೆ ಉತ್ತುಂಗಕ್ಕೆ ತಲುಪುವ ಭೀತಿ ಎದುರಾಗಿದೆ. ಹೀಗಾಗಿ ಶತಾಯ ಗತಾಯ ಜನರಲ್ಲಿ ಅರಿವು ಮೂಡಿಸಿ ಕೊರೋನಾ ಲಸಿಕೆ ಪಡೆಯುವಂತೆ ಮನವೊಲಿಸಲು ಬಿಬಿಎಂಪಿ ಸರ್ಕಸ್ ನಡೆಸಿದ್ದು ಇದಕ್ಕಾಗಿ ಸೆಲೆಬ್ರೆಟಿಗಳ ನೆರವು ಪಡೆಯಲು ಯೋಜನೆ ರೂಪಿಸಿದೆ.
ವೈದ್ಯರ ಮಾತು ಕೇಳದಿದ್ದರೂ ಜನರು ತಮ್ಮ ನೆಚ್ಚಿನ ನಟರ ಮಾತು ಕೇಳುತ್ತಾರೆ. ಹೀಗಾಗಿ ಸಿನಿಮಾ ನಟರಿಂದ ಕೊರೋನಾ ವಾಕ್ಸಿನ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲು ಬಿಬಿಎಂಪಿ ಸಿದ್ಧವಾಗಿದೆ. ಇದಕ್ಕಾಗಿ ಬಿಬಿಎಂಪಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮೊರೆ ಹೋಗಿದೆ. ಸ್ಯಾಂಡಲ್ ವುಡ್ ಸೆಂಚೂರಿ ಸ್ಟಾರ್ ಶಿವಣ್ಣ, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ರನ್ನು ಕೊರೋನಾ ವಾಕ್ಸಿನ್ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಬಳಸಿಕೊಳ್ಳಲು ಬಿಬಿಎಂಪಿ ಯೋಜನೆ ಸಿದ್ಧಪಡಿಸಿದೆ.
ಕೇವಲ ಶಿವಣ್ಣ, ಯಶ್, ಸುದೀಪ್ ಮಾತ್ರವಲ್ಲ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ರನ್ನು ಈ ಅಭಿಯಾನಕ್ಕೆ ಕೈಜೋಡಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ಬಿಬಿಎಂಪಿ ಯ ಈ ಜನಪರ ಕಾರ್ಯಕ್ಕೆ ಸೆಲೆಬ್ರೆಟಿಗಳು ಒಪ್ಪಿಕೊಂಡಿದ್ದು ಗೌರವಧನಪಡೆಯದೇ ಅರಿವು ಮೂಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ನಟರು ಹಾಗೂ ರಾಹುಲ್ ದ್ರಾವಿಡ್ ಹೇಳಿದ್ದಾರಂತೆ.
ವ್ಯಾಕ್ಸಿನ್ ತಗೋಳಿ ಜೀವ ಉಳಿಸಿಕೊಳ್ಳಿ ಮಾಸ್ಕ್ ಧರಿಸಿ .ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವ ರಕ್ಷಿಸಿಕೊಳ್ಳಿ. ಎರಡು ಡೋಸ್ ವ್ಯಾಕ್ಸಿನ್ ಪಡೆದು ವೈರಸ್ ನಿಂದ ಮುಕ್ತಿ ಪಡೆಯಿರಿ.ವೈರಸ್ ತಡೆಗಟ್ಟಲು ವ್ಯಾಕ್ಸಿನ್ ಒಂದೇ ದಾರಿ ಎಂಬ ಸ್ಲೋಗನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸ್ಯಾಂಡಲ್ ವುಡ್ ನಟರ ಜೊತೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ದೃಶ್ಯ ಮಾದ್ಯಮ, ಎಫ್ ಎಂ ರೇಡಿಯೋ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಅಭಿಯಾನ ನಡೆಯಲಿದೆ.
ಇದನ್ನೂ ಓದಿ : Omicron variant fear : ಹೆಚ್ಚುತ್ತಿದೆ ಓಮಿಕ್ರಾನ್ ಆತಂಕ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಇದನ್ನೂ ಓದಿ : Omicron treatment Private Hospital : ಓಮಿಕ್ರಾನ್ ರೋಗಿಗಳ ಬೇಡಿಕೆಗೆ ಮಣಿದ ಸರ್ಕಾರ: ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ
( Shivaraj kumar Yash Kiccha Sudeep BBMP attempt to voice corona awarness )