IPL 2026 : ಇಂದಿನಿಂದ ಶುರು ಐಪಿಎಲ್​ ಫೀವರ್​..! ಈ‌ ಬಾರಿ ಕಪ್ ನಮ್ದೇ ಅಂತಿದ್ದಾರೆ ಆರ್‌ಸಿಬಿ ಫ್ಯಾನ್ಸ್

IPL 2026 : ಇಂದಿನಿಂದ ಐಪಿಎಲ್​ ಟಿ 20 ಹಣಹಾಣಿ ಆರಂಭಗೊಳ್ಳುತ್ತಿದ್ದು 10 ತಂಡಗಳ ನಡುವೆ ನಡೆಯಲಿರುವ ರೋಚಕ ಹಣಾಹಣಿಗೆ ಸಂಪೂರ್ಣ ವಿಶ್ವವೇ ಸಾಕ್ಷಿಯಾಗಲಿದೆ.

ಬೆಂಗಳೂರು : ಅಭಿಮಾನಿಗಳು ಅತ್ಯಂತ ಕಾತುರದಿಂದ ಕಾಯುತ್ತಿದ್ದ ಘಳಿಗೆ ಕೊನೆಗೂ ಸಮೀಪಿಸಿದೆ. ಇಂದಿನಿಂದ ಐಪಿಎಲ್​ ಟಿ 20 ಹಣಹಾಣಿ ಆರಂಭಗೊಳ್ಳುತ್ತಿದ್ದು 10 ತಂಡಗಳ ನಡುವೆ ನಡೆಯಲಿರುವ ರೋಚಕ ಹಣಾಹಣಿಗೆ ಸಂಪೂರ್ಣ ವಿಶ್ವವೇ ಸಾಕ್ಷಿಯಾಗಲಿದೆ.

ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್​ ಉದ್ಘಾಟನಾ ಪಂದ್ಯ ಆರ್​ಸಿಬಿ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ. 19ನೇ ಆವೃತ್ತಿಯ ಐಪಿಎಲ್​ ಟೂರ್ನಮೆಂಟ್​ ಇದಾಗಿದ್ದು, ಕಪ್​ ಯಾರ ಮುಡಿಗೆ ಏರಲಿದೆ ಎನ್ನುವುದೇ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ಕಳೆದ ವರ್ಷ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಆರ್​ಸಿಬಿಯ 11 ಅಭಿಮಾನಿಗಳು ಮೃತಪಟ್ಟ ದಾರುಣ ಘಟನೆಯ ಬಳಿಕ ನಡೆಯುತ್ತಿರುವ ಐಪಿಎಲ್​ ಪಂದ್ಯಾವಳಿ ಇದಾಗಿದೆ. ಅಗಲಿದ ಅಭಿಮಾನಿಗಳ ಸ್ಮರಣಾರ್ಥ ಸ್ಮಾರಕಗಳನ್ನು ಲೋಕಾರ್ಪಣೆಗೊಳಿಸಲಾಗಿದ್ದು,ಇದರ ಜೊತೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ನಿರ್ಧರಿಸಲಾಗಿದೆ. ಇಂದು ಉದ್ಘಾಟನಾ ಪಂದ್ಯದಲ್ಲಿ ಕೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆರ್​ಸಿಬಿ ತಂಡ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಕಣಕ್ಕೆ ಇಳಿಯಲಿದೆ.

ಈ ಬಾರಿ ಐಪಿಎಲ್​ ಟೂರ್ನಿ 2 ತಿಂಗಳಿಗೂ ಅಧಿಕ ಕಾಲ ನಡೆಯಲಿದ್ದು, ರೋಚಕ ಫೈನಲ್​ ಹಣಾಹಣಿ ಮೇ 31ಕ್ಕೆ ನಿಗದಿಪಡಿಸಲಾಗಿದೆ. 65 ದಿನಗಳ ಈ ಸೆಣೆಸಾಟದಲ್ಲಿ ಒಟ್ಟೂ 74 ಪಂದ್ಯಗಳು ನಡೆಯಲಿದೆ. ಬಹುತೇಕ ದಿನಗಳಲ್ಲಿ ಒಂದೇ ಪಂದ್ಯ ನಡೆಯಲಿದ್ದು, ವಾರಾಂತ್ಯದಲ್ಲಿ ಮಾತ್ರ ಎರಡು ಪಂದ್ಯ ನಿಗದಿಪಡಿಸಲಾಗಿದೆ. ಎರಡು ಪಂದ್ಯಗಳಿರುವಾಗ ಮೊದಲ ಪಂದ್ಯ ಮಧ್ಯಾಹ್ನ 3:30 ಹಾಗೂ ಎರಡನೇ ಪಂದ್ಯ ಸಂಜೆ 7:30ಕ್ಕೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: IPL 2026: ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ?

ಒಟ್ಟೂ 10 ತಂಡಗಳ ಪೈಕಿ 5 ತಂಡಗಳ 2 ಗುಂಪುಗಳನ್ನು ಮಾಡಲಾಗಿದೆ. ಚೆನ್ನೈ, ಕೋಲ್ಕತಾ, ರಾಜಸ್ಥಾನ, ಆರ್‌ಸಿಬಿ, ಪಂಜಾಬ್‌ ಒಂದು ಗುಂಪಿನಲ್ಲಿದ್ದು, ಮುಂಬೈ, ಸನ್‌ರೈಸರ್ಸ್‌, ಗುಜರಾತ್‌, ಡೆಲ್ಲಿ ಹಾಗೂ ಲಖನೌ ತಂಡಗಳು ಮತ್ತೊಂದು ಗುಂಪಿನಲ್ಲಿವೆ. ಇದರಲ್ಲಿ ತಂಡಗಳು ತಮ್ಮದೇ ಗುಂಪಿನಲ್ಲಿರುವ ತಂಡಗಳ ಜೊತೆ 1 ಹಾಗೂ ಮತ್ತೊಂದು ಗುಂಪಿನ ತಂಡದೊಂದಿಗೆ 2 ಪಂದ್ಯಗಳನ್ನು ಆಡಬೇಕಿದೆ . ಲೀಗ್​ ಕೊನೆಯಲ್ಲಿ ಟಾಪ್​ 2 ಸ್ಥಾನ ಪಡೆಯುವ ತಂಡಗಳು ಕ್ವಾಲಿಫಾಯರ್​ ಹಂತಕ್ಕೆ ಹಾಗೂ 3, 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ ಪ್ರವೇಶಿಸಲಿವೆ. ಕ್ವಾಲಿಫೈಯರ್‌-1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೇರಲಿದೆ. ಸೋತ ತಂಡ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ವಿರುದ್ಧ ಆಡಲಿದ್ದು, ಅದರಲ್ಲಿ ಗೆಲ್ಲುವ ತಂಡ ಫೈನಲ್‌ ಪ್ರವೇಶಿಸಲಿದೆ.

ದೇಶದ 13 ನಗರಗಳಲ್ಲಿ ಈ ಭಾರಿ ಐಪಿಎಲ್​ ಪಂದ್ಯ ನಡೆಯಲಿದೆ. ಅಹಮದಾಬಾದ್‌, ಚೆನ್ನೈ, ಮುಂಬೈ, ಕೋಲ್ಕತಾ, ನವದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್‌, ಜೈಪುರ, ಲಖನೌ, ಮುಲ್ಲಾನ್‌ಪುರ, ರಾಯ್ಪುರದಲ್ಲೂ ಪಂದ್ಯ ಆಯೋಜನೆಗೊಂಡಿದೆ. ಆರ್​ಸಿಬಿ ವಿಜಯೋತ್ಸವದಲ್ಲಿ ಮಡಿದ ಅಭಿಮಾನಿಗಳಿಗೆ ಈ ಬಾರಿ ಟ್ರೋಫಿಯನ್ನು ಆರ್​ಸಿಬಿ ಅರ್ಪಿಸಲಿದ್ಯಾ ಅನ್ನೋದನ್ನ ಕಾದು ನೋಡಬೇಕಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories