ಮಂಗಳೂರು : ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಮಂಗಳೂರು ಪೊಲೀಸರ ಮುಂದೆ ಹಾಜರಾಗಿದ್ದಾನೆ. ಅಲ್ಲದೇ ಶಂಕಿತ ವ್ಯಕ್ತಿಯ ಕುರಿತು ಸ್ಪೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿಯಲ್ಲಿ ಲ್ಯಾಪ್ ಟಾಪ್ ಬ್ಯಾಗ್ ನಲ್ಲಿ ಸಜೀವ ಬಾಂಬ್ ಪತ್ತೆಯಾಗುತ್ತಿದ್ದಂತೆಯೇ ಮಂಗಳೂರಿಗೆ ಮಂಗಳೂರೇ ಬೆಚ್ಚಿ ಬಿದ್ದಿತ್ತು. ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂಧಿ ಅಂತಿಮವಾಗಿ ಬಾಂಬ್ ಸ್ಪೋಟಿಸೋ ಮೂಲಕ ಜನರ ಆತಂಕವನ್ನು ದೂರ ಮಾಡಿದ್ದರು.

ಆದ್ರೀಗ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗುತ್ತಲೇ ಪೊಲೀಸರು ಶಂಕಿತ ವ್ಯಕ್ತಿ, ಆತ ಬ್ಯಾಗ್ ಹಿಡಿದು ವಿಮಾನ ನಿಲ್ದಾಣಕ್ಕೆ ತೆರಳುತ್ತಿರೋ ದೃಶ್ಯ ಹಾಗೂ ಆತ ವಿಮಾನ ನಿಲ್ದಾಣಕ್ಕೆ ಬಂದು ಹೋಗುತ್ತಿರೋ ಆಟೋದ ಸಿಸಿ ಕ್ಯಾಮರಾ ದೃಶ್ಯಗಳನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಆಟೋ ಚಾಲಕ ಇಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಆಟೋ ಚಾಲಕ ಪೊಲೀಸರ ಮುಂದೆ ಹೇಳಿದ್ದೇನು ?
ನಿನ್ನೆ ಬಸ್ಸಿನಿಂದ ಇಳಿದ ವ್ಯಕ್ತಿಯೋರ್ವ ತನ್ನ ಆಟೋದಲ್ಲಿ ಕುಳಿತು ಏರ್ ಪೋರ್ಟ್ ಗೆ ಬಿಡುವಂತೆ ಹೇಳಿದ್ದಾನೆ. ಅದರಂತೆಯೇ ನಾನು ಆತನನ್ನು ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿದ್ದೆ. ನಂತರ ಹಿಂದಿರುಗಿ ಬಂದ ವ್ಯಕ್ತಿ ತನ್ನ ಬಳಿ ಮಂಗಳೂರಿಗೆ ತೆರಳುವಂತೆ ಹೇಳಿದ್ದಾನೆ. ಅಂತೆಯೇ ಆತನನ್ನು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದೆ. ಪಂಪ್ ವೆಲ್ ಬಳಿಯಲ್ಲಿ ಆತ ಆಟೋದಿಂದ ಕೆಳಗೆ ಇಳಿದಿದ್ದಾನೆ. ಅಲ್ಲದೇ ತನಗೆ 400 ರೂಪಾಯಿ ಬಾಡಿಗೆಯನ್ನೂ ನೀಡಿ ಹೋಗಿದ್ದಾನೆ. ತನ್ನ ಆಟೋದಲ್ಲಿ ಬಂದಿದ್ದ ಶಂಕಿತ ವ್ಯಕ್ತಿ ತುಳುವಿನಲ್ಲಿ ಮಾತನಾಡುತ್ತಿದ್ದ ಅನ್ನೋ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಆಟೋ ಚಾಲಕ ನೀಡಿರೋ ಮಾಹಿತಿಯನ್ನು ಆಧರಿಸಿ ಪೊಲೀಸರು ಮೂರು ವಿಶೇಷ ತಂಡವನ್ನು ರಚಿಸಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.