ಮಧ್ಯಪ್ರದೇಶ: 3 girls suicide: ಶಾಲೆಗೆ ಚಕ್ಕರ್ ಹೊಡೆದ 16 ವರ್ಷದ ಮೂವರು ಬಾಲಕಿಯರು ದುಡುಕಿನ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಶಾಲೆಗೆ ರಜೆ ಹಾಕಿ ತೆರಳಿದ್ದ ಮೂವರು ಬಾಲಕಿಯರು ಒಟ್ಟಿಗೆ ವಿಷ ಸೇವಿಸಿದ್ದಾರೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬಳ ಸ್ಥಿತಿ ಗಂಭೀರವಾಗಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ನಿನ್ನೆ(ಅ.28) ಈ ಘಟನೆ ನಡೆದಿದೆ.
ಸೆಹೋರ್ ಜಿಲ್ಲೆಯ ಅಷ್ಟಾ ಪಟ್ಟಣದಲ್ಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದ 16 ವರ್ಷದ ಈ ಮೂವರು ಬಾಲಕಿಯರು ನಿನ್ನೆ ಶಾಲೆಗೆ ರಜೆ ಹಾಕಿ 120 ಕಿ.ಮೀ ದೂರದಲ್ಲಿರುವ ಇಂದೋರ್ ಗೆ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲಿ ವಿಷದ ಬಾಟಲ್ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ವಿಷ ಸೇವನೆ ಮಾಡಿದ್ದಾರೆ. ಈ ಪೈಕಿ ಇಬ್ಬರು ನಿನ್ನೆ ರಾತ್ರಿ ಸಾವನ್ನಪ್ಪಿದ್ದರೆ, ಮತ್ತೊಬ್ಬಳು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಈ ಮೂವರನ್ನು ಪೂಜಾ, ಆರತಿ, ಪಾಲಕ್ ಎಂದು ಗುರುತಿಸಲಾಗಿದೆ. ಈ ಮೂವರು ಬಾಲಕಿಯರು ವಿಷ ಸೇವಿಸಿರುವ ಬಗ್ಗೆ ಆಸ್ಪತ್ರೆ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ತೆರಳಿದ ಪೊಲೀಸರು ವಿಷ ಸೇವನೆಗೆ ಕಾರಣ ತಿಳಿದುಕೊಂಡು ಬೆಚ್ಚಿಬಿದ್ದಿದ್ದಾರೆ.
ಘಟನೆಗೆ ಕಾರಣವೇನು..?
ಆ ಮೂವರು ಬಾಲಕಿಯರ ಪೈಕಿ ಒಬ್ಬಳು ಪ್ರಿಯಕರನನ್ನು ಭೇಟಿಯಾಗಲು ತನ್ನ ಇಬ್ಬರು ಗೆಳತಿಯರ ಜೊತೆ ಇಂದೋರ್ ಗೆ ಬಂದಿದ್ದಳು. ಪ್ರಿಯಕರ ಆಕೆಯ ಕಾಲ್ ರಿಸೀವ್ ಮಾಡದಿದ್ದ ಹಿನ್ನೆಲೆ ಆತನನ್ನು ನೇರವಾಗಿ ಮಾತನಾಡಿಸುವ ಸಲುವಾಗಿ ಆತ ವಾಸಿಸುತ್ತಿದ್ದ ಪ್ರದೇಶ ಇಂದೋರ್ ಗೆ ಗೆಳತಿಯರನ್ನು ಕರೆದುಕೊಂಡೇ ಬಂದಿದ್ದಾಳೆ. ಪ್ರಿಯಕರ ಭೇಟಿಯಾಗಲು ನಿರಾಕರಿಸಿದರೆ ವಿಷ ಸೇವಿಸುವ ನಿರ್ಧಾರವನ್ನು ಮೊದಲೇ ಆಕೆ ಮಾಡಿದ್ದಳು. ಇದೇ ಸಲುವಾಗಿ ಮೊದಲೇ ವಿಷದ ಬಾಟಲ್ ಖರೀದಿಸಿದ್ದಳು. ಇಂದೋರ್ ಗೆ ಬಂದ ಮೇಲೆ ಆಕೆ ಪ್ರಿಯಕರನಿಗೆ ಫೋನ್ ಮಾಡಿ ಭೇಟಿ ಮಾಡುವಂತೆ ಹೇಳಿದ್ದಾಳೆ, ಅಲ್ಲದೇ ಇಂದೋರ್ ಭವಾರ್ಕುಮ್ ಎಂಬಲ್ಲಿನ ಪಾರ್ಕ್ ನಲ್ಲಿ ಆಕೆ ತನ್ನ ಗೆಳತಿಯರ ಜೊತೆಗೆ ಆತನಿಗಾಗಿ ಬಹಳ ಹೊತ್ತು ಕಾದಿದ್ದಾರೆ. ಆದರೆ ಆತ ಅವಳನ್ನು ಭೇಟಿಯಾಗಲು ಬರಲಿಲ್ಲ ಎನ್ನಲಾಗಿದೆ.
ಇದರಿಂದ ಬೇಸತ್ತ ಪ್ರಿಯತಮೆ ನಿರ್ಜನ ಪ್ರದೇಶಕ್ಕೆ ತೆರಳಿ ವಿಷ ಸೇವಿಸಿದ್ದಾಳೆ. ಈ ವೇಳೆ ಜೊತೆಗಿದ್ದ ಮತ್ತೊಬ್ಬ ಬಾಲಕಿ ಕೂಡಾ ಕೌಟುಂಬಿಕ ಸಮಸ್ಯೆಯ ನೆಪ ನೀಡಿ ವಿಷ ಸೇವನೆ ಮಾಡಿದ್ದಾಳೆ. ಮತ್ತೊಬ್ಬ ಬಾಲಕಿ ಈಕೆಯ ಕ್ಲೋಸ್ ಫ್ರೆಂಡ್ ಆಗಿದ್ದು, ಗೆಳತಿಯ ಸಾವಿನ ಸತ್ಯ ಅರಗಿಸಲಾಗದೇ ವಿಷ ಸೇವಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುತ್ತಮುತ್ತಲಿನ ಜನರು ಇವರನ್ನು ನೋಡಿ ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
3 school girls from sehore consume poison in indore: two dead, one critical