ಸಿಎಂ ಬದಲಾವಣೆ ಬಳಿಕ ಪೊಲೀಸ್ ಇಲಾಖೆಗೂ ಸರ್ಜರಿ….! ಬದಲಾಗ್ತಾರಾ ಬೆಂಗಳೂರು ಕಮೀಷನರ್…!?

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಹಸನ ಅಂತ್ಯಗೊಂಡ ಬೆನ್ನಲ್ಲೇ  ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ನಡೆಯಲಿದೆ ಎನ್ನಲಾಗುತ್ತಿದೆ. ಅತ್ಯಂತ ಪ್ರಮುಖವಾದ ಬೆಂಗಳೂರು ನಗರ ಪೊಲೀಸ ಆಯುಕ್ತರ ಬದಲಾವಣೆಗೆ ಸಿದ್ಧತೆ ನಡೆದಿದ್ದು, ಕಮೀಷನರ್ ಹುದ್ದೆಗೆರಲು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಭರ್ಜರಿ ಪೈಪೋಟಿ ಆರಂಭಗೊಂಡಿದೆ.

ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂಥ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ಸಂಕಷ್ಟ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೇರಿದಂತೆ ಹಲವು ಸಂದಿಗ್ಧ ಪರಿಸ್ಥಿತಿಯಲ್ಲೂ ಕಮಲಪಂಥ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.

ಆದರೆ ನಗರ ಪೊಲೀಸ್ ಆಯುಕ್ತರ ಅಧಿಕಾರಾವಧಿ ಅಗಸ್ಟ್ ಗೆ ಮುಕ್ತಾಯಗೊಳ್ಳಲಿದ್ದು, ಹೀಗಾಗಿ ಮುಂದಿನ ಆಯುಕ್ತರ ನೇಮಕಕ್ಕೆ ಸಿದ್ಧತೆ ನಡೆದಿದೆ. ಈ ಮಧ್ಯೆ ಬೆಂಗಳೂರು ಕಮೀಷನರ್ ಸ್ಥಾನಕ್ಕೆ ಭರ್ಜರಿ ಪೈಪೋಟಿ ಇದ್ದು, ಬೆಂಗಳೂರಿನ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಪ್ರಸ್ತುತ ಮೈಸೂರು ಕಮೀಷನರ್ ಆಗಿರುವ ಎಂ.ಎ.ಸಲೀಂ, ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಪ್ರತಾಪ್ ರೆಡ್ಡಿ, ಪೊಲೀಸ್ ತರಬೇತಿ ವಿಭಾಗದ  ಅಮೃತ್ ಪೌಲ್, ಗುಪ್ತಚರ ವಿಭಾಗದ ಬಿ.ದಯಾನಂದ್ ಹೆಸರು ಮುಂಚೂಣಿಯಲ್ಲಿದೆ.

ಈ ಮಧ್ಯೆ ಆಡಳಿತ ಸುವ್ಯವಸ್ಥೆ ಹಾಗೂ ಅನುಭವದ ಆಧಾರದ ಮೇಲೆ ಕನ್ನಡಿಗರಾದ ಬಿ.ದಯಾನಂದ್ ಹಾಗೂ ಎಂ.ಎ.ಸಲೀಂ ಗೆ ಹೆಚ್ಚಿನ ಅವಕಾಶವಿದ್ದು, ಈ ಇಬ್ಬರೂ ಐಪಿಎಸ್ ಅಧಿಕಾರಿಗಳ ಪೈಕಿ ಒಬ್ಬರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

ಇದಲ್ಲದೇ ನಗರದ ಹಲವು ಡಿಸಿಪಿಗಳ ಸ್ಥಾನ ಬದಲಾವಣೆಯಾಗಲಿದ್ದು, ಆಡಳಿತಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಡಿಸಿಪಿಗಳನ್ನು ವರ್ಗಾಯಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಿಎಂ ಬದಲಾವಣೆ ಬಳಿಕ ಬೆಂಗಳೂರು ಪೊಲೀಸ್ ಕಮೀಷನರ್ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು. ಯಾರಾಗಲಿದ್ದಾರೆ ಸಿಲಿಕಾನ್ ಸಿಟಿಯ ದಂಡನಾಯಕರು ಎಂಬ ಕುತೂಹಲ ಮೂಡಿದೆ.  

Comments are closed.