ಬೆಂಗಳೂರು : Tasteless Kebabs : ಕೆಲವರಿಗೆ ಯಾವುದು ಸರಿ ಅಂದರೂ ತಿನ್ನುವ ಆಹಾರ ಮಾತ್ರ ಸರಿ ಇರಬೇಕು. ರುಚಿಯಲ್ಲಿ ಸಣ್ಣ ಬದಲಾವಣೆಯನ್ನೂ ಸಹಿಸುವುದಿಲ್ಲ. ಆದರೆ ಈ ಅಭ್ಯಾಸವು ಒಬ್ಬರ ಜೀವ ತೆಗೆಯುವಂತಿದ್ದರೆ ಭಾರೀ ಕಷ್ಟ. ಈ ವಿಚಾರವನ್ನು ಈ ಸಂದರ್ಭದಲ್ಲಿ ವಿವರಿಸಲು ಕಾರಣ ಕೂಡ ಇದೆ. ಏಕೆಂದರೆ ಈ ಮಾತುಗಳಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪತ್ನಿಯು ಕಬಾಬ್ ತಯಾರಿಸಿದ್ದು ರುಚಿಯಾಗಿಲ್ಲ ಎಂಬ ಕಾರಣಕ್ಕೆ ಪತಿಯು ಆಕೆಯೊಂದಿಗೆ ಜಗಳವಾಡಿದ್ದು ಮಾತ್ರವಲ್ಲದೇ ಆಕೆಯನ್ನು ಮಾರಕಾಸ್ತ್ರಗಳಿಂದ ಇರಿದಿದ್ದಾನೆ. ಬಳಿಕ ಸ್ಥಳೀಯರು ತನಗೆ ಥಳಿಸಬಹುದು ಎಂಬ ಭಯದಿಂದ ಈತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ .
ಮೃತ ಆರೋಪಿಯನ್ನು ಸುರೇಶ್ ಎಂ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಅರೆಕೆರೆ ಲೇ ಔಟ್ನ ಬನ್ನೇರುಘಟ್ಟ ರಸ್ತೆಯಲ್ಲಿ ಜುಲೈ 27ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಸುರೇಶ್ ಎಂ. ಕೆಲಸ ಮುಗಿಸಿ ಮನೆಗೆ ತೆರಳಿದ್ದ. ಮನೆಗೆ ಬಂದವನೇ ಮದ್ಯಪಾನ ಮಾಡಲು ಶುರು ಮಾಡಿದ್ದ ಈತ ತನಗೆ ಡ್ರಿಂಕ್ಸ್ ಮಾಡುವ ವೇಳೆ ತಿನ್ನಲು ಕಬಾಬ್ ಬೇಕು ಎಂದು ಪತ್ನಿ ಬಳಿ ಡಿಮ್ಯಾಂಡ್ ಮಾಡಿದ್ದಾನೆ. ಪತ್ನಿ ಶಾಲಿನಿ ಕೂಡ ಪತಿಗೆ ಕಬಾಬ್ ತಯಾರಿಸಿಕೊಟ್ಟಿದ್ದರು. ಕಬಾಬ್ ಸೇವಿಸಿದ ಸುರೇಶ್ ಮಾಡಿದ ಕಬಾಬ್ ರುಚಿಯಾಗಿಲ್ಲ ಎಂದು ಕ್ಯಾತೆ ತೆಗೆದಿದ್ದ .
ಇದೇ ವಿಚಾರವಾಗಿ ಪತ್ನಿ ಶಾಲಿನಿ ಹಾಗೂ ಸುರೇಶ್ ನಡುವೆ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ಸುರೇಶ್ ಪತ್ನಿಯ ಕೈಗಳನ್ನು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಕತ್ತರಿಸಿದ್ದಾನೆ. ನೋವಿನಿಂದ ಪತ್ನಿಯು ಕಿರುಚಲು ಆರಂಭಿಸುತ್ತಿದ್ದಂತೆಯೇ ಈತ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಕೂಡಲೇ ಪತ್ನಿ ಶಾಲಿನಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪರಾರಿಯಾಗಿದ್ದ ಸುರೇಶ್ಗಾಗಿ ಪೊಲೀಸರು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಆತ ಅಲ್ಲೇ ಸಮೀಪದಲ್ಲಿ ಖಾಲಿ ನಿವೇಶನದಲ್ಲಿ ನೇಣಿಗೆ ಶರಣಾದ ಮಾಹಿತಿ ಲಭ್ಯವಾಗಿದೆ. ಸುರೇಶ್ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ದಂಪತಿ ಮೂಲತಃ ಕೊಡಗಿನವರಾಗಿದ್ದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಬೊಮ್ಮನಹಳ್ಳಿಯಲ್ಲಿರುವ 2 ಬೇರೆ ಬೇರೆ ಗಾರ್ಮೆಂಟ್ಸ್ಗಳಲ್ಲಿ ಇವರು ಕೆಲಸಕ್ಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Commercial LPG cylinder :ವಾಣಿಜ್ಯ ಸಿಲಿಂಡರ್ಗಳ ದರ 36 ರೂಪಾಯಿ ಇಳಿಕೆ
ಇದನ್ನೂ ಓದಿ : WhatsApp : ವಾಟ್ಸ್‌ಅಪ್‌ನಲ್ಲಿ ಇನ್ನುಮುಂದೆ ಗ್ರೂಪ್ ಅಡ್ಮಿನ್‌ಗಳು ಗ್ರೂಪ್‌ನ ಯಾವ ಮೆಸ್ಸೇಜ್ ಆದರೂ ಡಿಲೀಟ್ ಮಾಡಬಹುದು!
Bengaluru Man Stabs Wife Over Tasteless Kebabs Dies By Suicide Later