ಬೆಳ್ತಂಗಡಿ : ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ 8 ವರ್ಷದ ಮಗುವನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದಿದೆ. ಕಿಡ್ನಾಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಅಪಹರಣಕಾರರು ಇದೀಗ ಬರೋಬ್ಬರಿ 17 ಕೋ.ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಅಶ್ವತ್ಥಕಟ್ಟೆಯ ಬಳಿಯಲ್ಲಿರುವ ಮನೆಯಲ್ಲಿ ಅನುಭವ್ ಎಂಬ 8 ವರ್ಷದ ಮಗು ಆಟವಾಡುತ್ತಿತ್ತು. ಈ ವೇಳೆಯಲ್ಲಿ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ದುಷ್ಕರ್ಮಿಗಳು ಮಗುವನ್ನು ಕಾರಿನಲ್ಲಿ ಅಪಹರಿಸಿ ಎಸ್ಕೇಪ್ ಆಗಿದ್ದಾರೆ.
ಸಂಜೆ 6.30ರ ಸುಮಾರಿಗೆ ಮನೆಯ ಬಳಿಯಲ್ಲಿ ಇಂಡಿಕಾ ಕಾರು ನಿಂತಿರುವುದನ್ನು ಮನೆ ಮಂದಿ ಗಮನಿಸಿದ್ದಾರೆ. ಮಗುವನ್ನು ಅಪಹರಣ ಮಾಡಿರುವ ದುಷ್ಕರ್ಮಿಗಳು ಧರ್ಮಸ್ಥಳ ಅಥವಾ ಚಾರ್ಮಾಡಿ ಮಾರ್ಗದಲ್ಲಿ ಸಂಚರಿಸಿರುವ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಮುಂಡಾಜೆ ಹಾಗೂ ಕೊಟ್ಟಿಗೆಹಾರದಲ್ಲಿ ನಾಕಾಬಂಧಿ ಹಾಕಿದ್ದಾರೆ. ದುಷ್ಕರ್ಮಿಗಳು ಹಾಸನ, ಆಲೂರಿನಲ್ಲಿರುವುದು ಮೊಬೈಲ್ ಲೊಕೇಷನ್ ಟ್ರೇಸ್ ನಿಂದ ಪತ್ತೆಯಾಗಿದೆ.
ಈ ನಡುವಲ್ಲೇ ಮುಗುವಿನ ತಾಯಿಗೆ ಕರೆ ಮಾಡಿರುವ ದುಷ್ಕರ್ಮಿಗಳು ಬರೋಬ್ಬರಿ 100 ಬಿಟ್ ಕಾಯಿನ್ ( ಅಂದಾಜು 17 ಕೋಟಿ ರೂಪಾಯಿ) ನೀಡಬೇಕೆಂಬ ಬೇಡಿಕೆಯಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಇದೇ ಕಾರು ಮಗುವಿನ ಮನೆ ಸಮೀಪದ ಮೈದಾನದಲ್ಲಿ ನಿಲ್ಲುತ್ತಿತ್ತು ಎಂದು ಸ್ಥಳೀಯ ಯುವಕರು ತಿಳಿಸಿದ್ದಾರೆ. ಮಗುವಿನ ಅಪಹರಣದಿಂದಾಗಿ ಇದೀಗ ಕರಾವಳಿಯಾದ್ಯಂತ ಆತಂಕ ಶುರುವಾಗಿದೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ತಂಡ ರಚಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.