ಕಲಬುರಗಿ : ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನನ್ನು ರುಂಡ ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಬಳಿ ನಡೆದಿದೆ.
ಸಂಗನಗೌಡ ನಿಂಗನಗೌಡ ಪಾಟೀಲ (32 ವರ್ಷ) ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ. ಎಂದಿನಂತೆ ಕೆಲಸಮುಗಿಸಿ ಮನೆಗೆ ತನ್ನ ಬೈಕಿನಲ್ಲಿ ತೆರಳುತ್ತಿದ್ದ. ಈ ವೇಳೆಯಲ್ಲಿ ಊರಿನ ಹೊರ ಭಾಗದಲ್ಲಿ ಮೂರು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಂಗನ ಗೌಡನ ರುಂಡ ಕತ್ತರಿಸಿದ್ದಾರೆ.
ನಂತರದಲ್ಲಿ ಮೃತದೇಹದ ಮೇಲೆ ವಾಹನವನ್ನು ಹಾಯಿಸಿ ಅಪಘಾತವೆಂದು ಬಿಂಬಿಸಲು ಮುಂದಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಅಪಘಾತವಲ್ಲ, ಕೊಲೆ ಅನ್ನೋದು ಬಯಲಾಗಿದೆ. ನೆಲೋಗಿ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ.