ಹಾಸನ: Bus accident:ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋನೇರ್ಲು ಗ್ರಾಮದ ರಸ್ತೆಯ ತಿರುವಿನಲ್ಲಿ ಈ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಶಿಕ್ಷಣ ಸಂಸ್ಥೆ ಮಾನಸ ಗಂಗೋತ್ರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆಂದು ಹೊರಟಿದ್ದರು. ಮೈಸೂರಿನಿಂದ ಬೇಲೂರು ಮಾರ್ಗವಾಗಿ ಹೊರನಾಡು ಮತ್ತು ಮಂಗಳೂರು ಭಾಗಕ್ಕೆ ಪ್ರವಾಸ ಹೊರಟಿದ್ದರು. ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಹಾಸನದ ಬೇಲೂರು ಠಾಣಾ ವ್ಯಾಪ್ತಿಯ ಕೋನೇರ್ಲು ಗ್ರಾಮದ ರಸ್ತೆ ತಿರುವಿನಲ್ಲಿ ಬಸ್ ಸಂಚರಿಸುತ್ತಿದ್ದಂತೆ ಬಸ್ ತಿರುವಿನಲ್ಲಿದ್ದ ಮರಕ್ಕೆ ಗುದ್ದಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ಅವಘಡ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: POCSO Case : ಮುರುಘಾ ಶ್ರೀ ಮತ್ತು ಇಬ್ಬರ ವಿರುದ್ಧ ಆರೋಪ ದೃಢ : ಚಿತ್ರದುರ್ಗ ಎಸ್ಪಿ
ಇನ್ನು ಬಸ್ ಮರಕ್ಕೆ ಗುದ್ದಿದ ಪರಿಣಾಮ ಬಸ್ ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೇ ಅಪಘಾತದ ರಭಸಕ್ಕೆ ಬಸ್ ನ ಹಿಂಬದಿಯೂ ನಜ್ಜುಗುಜ್ಜಾಗಿದೆ.
ಇದನ್ನೂ ಓದಿ: Adipurush movie: ಚಿತ್ರತಂಡದ ‘ಆ’ ಎಡವಟ್ಟಿನಿಂದ ‘ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ
ಅಪಘಾತದ ಪರಿಣಾಮ ಬಸ್ ನಲ್ಲಿದ್ದ ಬದಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಇನ್ನುಳಿದಂತೆ ನಿರ್ವಾಹಕ, ಪ್ರಾಂಶುಪಾಲರು ಸೇರಿದಂತೆ ಇತರೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಹಾಸನ ಹಾಗೂ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ಲಾಡ್ಜ್ ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Bus accident: A private bus in which 40 students were traveling collided; Accident due to driver’s loss of control