ಡೇಟಿಂಗ್ ಆ್ಯಪ್ ಬಳಸುವವರೇ ಎಚ್ಚರ ..ಎಚ್ಚರ..! ಮದುವೆಯಾಗುವುದಾಗಿ ನಂಬಿಸಿ ಟೆಕ್ಕಿಂಗ್ ಪಂಗನಾಮ
ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್ಗಳನ್ನು ಬಳಕೆ ಮಾಡುವ ಯುವ ಸಮೂಹದ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಡೇಟಿಂಗ್ ಆ್ಯಪ್ಗಳಲ್ಲಿಯೂ (Dating apps crime) ಸೈಬರ್ ವಂಚಕರು ಸಕ್ರಿಯರಾಗಿದ್ದು ಮೋಸದ ಜಾಲಕ್ಕೆ ಅಮಾಯಕರನ್ನು ಬೀಳಿಸುತ್ತಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು , ಡೇಟಿಂಗ್ ಆ್ಯಪ್ನಲ್ಲಿ ಮದುವೆಯಾಗುತ್ತೇನೆಂದು ನಂಬಿಸಿದ ಮಹಿಳೆಯು ಟೆಕ್ಕಿಯೊಬ್ಬರಿಂದ 18 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿ ಕಣ್ಮರೆಯಾಗಿದ್ದಾಳೆ..!
ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಈ ಸಂಬಂಧ ಪ್ರಕರಣದ ದಾಖಲಾಗಿದೆ. ಡೇಟಿಂಗ್ ಆ್ಯಪ್ ಬಳಕೆ ಮಾಡುತ್ತಿದ್ದ ಯುವ ಇಂಜಿನಿಯರ್ ಒಬ್ಬರನ್ನು ಈ ಮಹಿಳೆ ಪರಿಚಯ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಮದುವೆಯ ಹಂತದವರೆಗೂ ಮಾತುಕತೆಯಾಗಿತ್ತು. ತನ್ನನ್ನು ತಾನು ಇನ್ವೆಸ್ಟ್ಮೆಂಟ್ ಎಕ್ಸ್ಪರ್ಟ್ ಎಂದು ಪರಿಚಯಿಸಿಕೊಂಡಿದ್ದ ವಂಚಕಿ, ಕ್ರಿಪ್ರೋ ಕರೆನ್ಸಿ, ಟ್ರೇಡಿಂಗ್ಗಳ ಮೂಲಕ ಹಣ ದ್ವಿಗುಣ ಮಾಡುವ ಚಾಕಚಕ್ಯತೆ ನನ್ನಲ್ಲಿದೆ ಎಂದು ಹೇಳಿಕೊಂಡಿದ್ದಳು.
ಇದನ್ನೂ ಓದಿ: ಉಡುಪಿ : ಟ್ರೆಡಿಂಗ್ ಆ್ಯಪ್ ಹೆಸರಿನಲ್ಲಿ 11.75 ಲಕ್ಷ ರೂಪಾಯಿ ವಂಚನೆ
ವಂಚಕಿಯ ಮಾತನ್ನು ನಂಬಿದ್ದ ಇಂಜಿನಿಯರ್ ತಾನು ಕೂಡ ಕೋಟ್ಯಾಧಿಪತಿಯಾಗಬಹುದೆಂಬ ಕನಸು ಕಂಡಿದ್ದರು. ಆಕೆಯ ಮಾತಿನಂತೆ ತನ್ನ ಬ್ಯಾಂಕ್ ಖಾತೆಯಿಂದ ಆಕೆಗೆ 18.25 ಲಕ್ಷ ರೂಪಾಯಿಗಳನ್ನು ಹಂತ ಹಂತವಾಗಿ ಟೆಕ್ಕಿ ನೀಡಿದ್ದರು ಎನ್ನಲಾಗಿದೆ. ಹಣ ಪಡೆದುಕೊಂಡ ಬಳಿಕ ವಂಚಕಿಯು ತನ್ನ ವರಸೆ ಬದಲಾಯಿಸಿದ್ದಾಳೆ. ಲಾಬಾಂಶ ಹಾಗಿರಲಿ , ಕೊಟ್ಟ ಹಣ ಮರಳಿ ಕೊಡು ಎನ್ನುವಾಗಲೂ ಆಕೆ ನುಣುಚಿಕೊಳ್ಳಲು ಆರಂಭಿಸಿದ್ದಾಳೆ.ಕೊನೆಗೊಂದು ದಿನ ಟೆಕ್ಕಿಯ ನಂಬರ್ನ್ನೇ ಡಿಲೀಟ್ ಮಾಡಿ ಎಸ್ಕೇಪ್ ಆಗಿದ್ದಾಳೆ.
ಈ ಸಂಬಂಧ ಸೈಬರ್ ಠಾಣೆಯಲ್ಲಿ ಟೆಕ್ಕಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಮಹಿಳೆಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಡೇಟಿಂಗ್ ಆ್ಯಪ್ಗಳಲ್ಲಿ ಸಿಗುವವರನ್ನು ನಂಬಿ ಈ ರೀತಿ ಮೋಸ ಹೋಗಬೇಡಿ. ಆರ್ಥಿಕ ಸಲಹೆ ನೀಡುವವರ ಬಗ್ಗೆ ಜಾಗೂರಕರಾಗಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



