ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಡೆಡ್ಲಿ ಅಟ್ಯಾಕ್..! ಪೊಲೀಸ್ ಠಾಣೆ ಅತಿಥಿಯಾದ ಕಿರಾತಕ
ಪ್ರೀತಿ ನಿರಾಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿ, ನನಗೆ ಸಿಗದವಳು ಭೂಮಿ ಮೇಲೆಯೇ ಇರಬಾರದು ಎಂಬ ದುರುದ್ದೇಶದೊಂದಿಗೆ ಅಮಾನವೀಯ ಕೃತ್ಯ ಎಸಗಿದ್ದಾನೆ.
ಪ್ರೀತಿ ಹಲವರ ಬಾಳನ್ನು ಬೆಳಗಿದ್ದರೆ ಇನ್ನೂ ಕೆಲವರ ಬದುಕನ್ನು ಅಕ್ಷರಶಃ ನರಕವನ್ನಾಗಿಸಿದೆ. ಈ ಮಾತಿಗೆ ನೈಜ ಉದಾಹರಣೆ ಎಂಬಂತ ಘಟನೆ ಚಿಕ್ಕಮಗಳೂರು ನಗರದಲ್ಲಿಯೇ ಸಂಭವಿಸಿದೆ. ಪ್ರೀತಿ ನಿರಾಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿ, ನನಗೆ ಸಿಗದವಳು ಭೂಮಿ ಮೇಲೆಯೇ ಇರಬಾರದು ಎಂಬ ದುರುದ್ದೇಶದೊಂದಿಗೆ ಅಮಾನವೀಯ ಕೃತ್ಯ ಎಸಗಿದ್ದಾನೆ.
ಮನಸೋ ಇಚ್ಛೆ ತಾಯಿ ಹಾಗೂ ಮಗಳ ಮೇಲೆ ರಾಡ್ನಿಂದ ಹಲ್ಲೆ ಎಸಗಿದ ಐನಾತಿ ಆಸಾಮಿ ಇದೀಗ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ, ಇದೇ ಚಿಕ್ಕಮಗಳೂರಿನ ಶಂಕರಪುರ ನಿವಾಸಿಯಾದ ಕುಮಾರ್ ಎಂಬಾತ ಇದೇ ಏರಿಯಾದ ಕೃಪಾ ಎಂಬ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ ಜೊತೆಯಲ್ಲಿ ಪೀಡಿಸುತ್ತಲೂ ಇದ್ದ.
ಸದಾ ಪಾನಮತ್ತನಾಗಿಯೇ ಇರುತ್ತಿದ್ದ ಕುಮಾರ್ ಮೇಲೆ ಕಿಂಚಿತ್ತೂ ಒಲವಿಲ್ಲದ ಕೃಪಾ ಅನೇಕ ಬಾರಿ ನನ್ನ ಹಿಂದೆ ಬೀಳಬೇಡ ಎಂದು ಹೇಳುತ್ತಲೇ ಇದ್ದಳು. ಆದರೂ ಕ್ಯಾರೇ ಎನ್ನದ ಕುಮಾರ್ ಆಕೆಗೆ ಪ್ರೀತಿಯ ಹೆಸರಲ್ಲಿ ಇನ್ನಿಲ್ಲದ ಕಿರುಕುಳ ಕೊಡುತ್ತಲೇ ಇದ್ದ ಎನ್ನಲಾಗಿದೆ.
ಕುಮಾರ್ ಕಾಟ ತಡೆಯಲಾರದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಯುವತಿ ಕೃಪಾ, ದೂರು ದಾಖಲಿಸಿದ್ದಳು. ಬಳಿಕ ಠಾಣೆಗೆ ಕುಮಾರ್ನನ್ನು ಕರೆಯಿಸಿದ್ದ ಪೊಲೀಸರು ಬುದ್ಧಿ ಹೇಳಿ ಕಳಿಸಿಕೊಟ್ಟಿದ್ದರು. ಆದರೆ ಪ್ರಯೋಜನವಂತೂ ಆಗಿರಲಿಲ್ಲ. ಕೃಪಾ ತನ್ನ ಮುಖವನ್ನೇ ನೋಡುತ್ತಿಲ್ಲ ಎಂಬುದು ಕುಮಾರ್ಗೆ ಯಾವಾಗ ತಿಳಿಯಿತೋ ಆತ ಕೆರಳಿ ರಾಕ್ಷಸನಂತಾಗಿದ್ದ.
ಕೃಪಾ ಈ ಭೂಮಿ ಮೇಲೆಯೇ ಇರಬಾರದು ಎಂದು ಡೆಡ್ಲಿ ಅಟ್ಯಾಕ್ ಪ್ಲಾನ್ ಮಾಡಿದ್ದ. ಕೃಪಾ ಬೆಳಿಗ್ಗೆ ತನ್ನ ತಾಯಿಯನ್ನು ಕೆಲಸದ ಸ್ಥಳಕ್ಕೆ ಬಿಡಲು ತೆರಳಿದ್ದಳು. ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ ಬಳಿ ತಾಯಿ – ಮಗಳಿಗೆ ಕುಮಾರ್ ಎದುರಾಗಿದ್ದಾನೆ, ಕೈಯಲ್ಲಿ ರಾಡ್ ಹಿಡಿದಿದ್ದ ಕುಮಾರ್, ತಾಯಿ ಹಾಗೂ ಮಗಳ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಹಾಗೂ ಮಗಳನ್ನು ಅಲ್ಲಿಯೇ ಬಿಟ್ಟು ಸೀದಾ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸರ ಬಳಿ ಹೋಗಿ ನಾನು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಇನ್ನು ಹಲ್ಲೆಯ ತೀವ್ರತೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೃಪಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲೆ ಮಾಡಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿರುವ ಯುವತಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಹಲ್ಲೆಗೊಳಗಾದ ತಾಯಿಯನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.



