Fake suicide drama: ಅಪ್ಪ- ಅಮ್ಮನ ಸಾವಿಗೆ ಸೇಡು ತೀರಿಸಿಕೊಳ್ಳಲು ಮಗಳು ಮಾಡಿದ್ದು ಖತರ್ನಾಕ್ ಪ್ಲ್ಯಾನ್: ಈಕೆಯ ಮಾಸ್ಟರ್ ಮೈಂಡ್ ಹಿಂದಿತ್ತು ಹಿಂದಿ ಸೀರಿಯಲ್..!

ನೊಯ್ಡಾ: Fake suicide drama: ಸೀರಿಯಲ್ ಇರೋದು ಜನರ ಮನರಂಜನೆಗಾಗಿ ಅಷ್ಟೆ. ಆದರೆ ಇಲ್ಲೊಬ್ಬ ಯುವತಿಗೆ ಆ ಸೀರಿಯಲ್ ತನ್ನ ಅಪ್ಪ- ಅಮ್ಮನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಸ್ಫೂರ್ತಿ ಆಗಿದೆ. ಅದಕ್ಕಾಗಿಯೇ ಆಕೆ ಒಬ್ಬ ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿದ್ದಾಳೆ. ಮಾತ್ರವಲ್ಲ ತನ್ನದೇ ಸಾವಿನ ಕತೆ ಕಟ್ಟಿ ಸ್ವಂತ ಅಣ್ಣಂದಿರಿಗೆ ಚಳ್ಳೆಹಣ್ಣು ತಿನ್ನಿಸಿ ಪೊಲೀಸ್ ಇಲಾಖೆಗೆ ತಲೆನೋವು ತಂದಿಟ್ಟಿದ್ದಾಳೆ. ಕೊನೆಗೂ ಈಕೆಯ ಹೈಡ್ರಾಮಾ ಬಯಲಾಗಿ ಆಕೆ ಇದೀಗ ಕಂಬಿ ಎಣಿಸುತ್ತಿದ್ದಾಳೆ.

ನೊಯ್ಡಾದ ಬಿಸ್ರಖ್ ಪ್ರದೇಶದಲ್ಲಿ ನಡೆದ ಘಟನೆಯೊಂದು ಅಲ್ಲಿನ ಜನರನ್ನೇ ಬೆಚ್ಚಿಬೀಳಿಸಿದೆ. ಒಬ್ಬ ಖತರ್ನಾಕ್ ಲೇಡಿ ಮಾಸ್ಟರ್ ಮೈಂಡ್ ಗೆ ಪೊಲೀಸರೇ ಯಾಮಾರಿದ್ದಾರೆ. ಅಷ್ಟಕ್ಕೂ ಆಕೆಯ ಎಲ್ಲಾ ಯೋಜನೆಗಳಿಗೂ ಪ್ರೇರಣೆ ಹಿಂದಿಯ ಕಬೂಲ್ ಹೆ ಸೀರಿಯಲ್ ಅಂತೆ.

ಇದನ್ನೂ ಓದಿ: Zubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಆಸ್ಪತ್ರೆಗೆ ದಾಖಲು

ಪೊಲೀಸರಿಗೆ ಸಿಕ್ಕಿತ್ತು ಯುವತಿಯ ಮೃತದೇಹ:

ನವೆಂಬರ್ 12ರಂದು ದಾದ್ರಿ ಠಾಣೆಯ ಪೊಲೀಸರಿಗೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಂದಿತ್ತು. ಮೃತ ಯುವತಿಗೆ 21 ವರ್ಷ ವಯಸ್ಸಾಗಿತ್ತು. ಸ್ಥಳಕ್ಕೆ ತೆರಳಿದ್ದ ಪೊಲೀಸರಿಗೆ ಸುಟ್ಟು ಕರಕಲಾದ ಮುಖದ ಯುವತಿಯ ಮೃತದೇಹ ಕಂಡುಬಂದಿತ್ತು. ಅಲ್ಲದೇ ಪಕ್ಕದಲ್ಲೇ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ನನ್ನ ಮೈ, ಮುಖವೆಲ್ಲಾ ಸುಟ್ಟುಹೋಗಿದೆ. ಈ ಮುಖ ಹೊತ್ತು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿತ್ತು. ಹೀಗಾಗಿ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಪೊಲೀಸರು ಹಾಗೂ ಆ ಯುವತಿಯ ಮನೆಮಂದಿ ನಂಬಿದ್ದರು. ಅಂದಹಾಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದೇ ನಂಬಲಾಗಿದ್ದ ಯುವತಿಯ ಹೆಸರು ಪಾಯಲ್ ಭಾಟಿ ಎಂಬುದಾಗಿತ್ತು.

ಪೊಲೀಸರಿಗೆ ಅನುಮಾನ ಮೂಡಿಸಿದ ಯುವತಿ ಮಿಸ್ಸಿಂಗ್ ಕೇಸ್:

ಈ ಘಟನೆ ನಡೆದ ಕೆಲ ದಿನಗಳ ಬಳಿಕ ಅದೇ ಪೊಲೀಸ್ ಠಾಣೆಗೆ ಹೇಮಲತಾ ಎಂಬ ಯುವತಿ ನಾಪತ್ತೆ ಆಗಿರುವ ಬಗ್ಗೆ ಆಕೆಯ ಸಹೋದರ ದೂರು ದಾಖಲಿಸಿದ್ದರು. ಇದರ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಒಂದೊಂದೇ ಸುಳಿವು ಸಿಗುತ್ತಾ ಹೋಗುತ್ತದೆ. ಮೊದಲಿಗೆ ಹೇಮಲತಾ ಮೊಬೈಲ್ ಪರಿಶೀಲನೆ ನಡೆಸಿದಾಗ ಅಜಯ್ ಎಂಬಾತನ ನಂಬರ್ ಸಿಗುತ್ತದೆ. ಹೀಗಾಗಿ ನೇರವಾಗಿ ಆತನನ್ನು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಾರೆ. ಆಗ ಬಯಲಾಗಿದ್ದು ಅಜಯ್ ನವೆಂಬರ್ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದ ಪಾಯಲ್ ಭಾಟಿಯ ಪ್ರೇಮಿ ಎಂಬ ಸತ್ಯ.

ಸತ್ಯಾಂಶ ತಿಳಿದು ಬೆಚ್ಚಿಬಿದ್ದಿದ್ದ ಪೊಲೀಸರು:

ಪೊಲೀಸರ ತೀವ್ರ ವಿಚಾರಣೆ ವೇಳೆ ಅಜಯ್ ನಿಜಾಂಶವನ್ನು ಬಾಯ್ಬಿಟ್ಟಿದ್ದಾನೆ. ನ.12ರಂದು ಬಿಸ್ರಖ್ ಪ್ರದೇಶದಲ್ಲಿ ಸಿಕ್ಕಿದ್ದ ಮೃತದೇಹ ಪಾಯಲ್ ದಲ್ಲ. ಬದಲಿಗೆ ಹೇಮಲತಾಳದ್ದು. ಪಾಯಲ್ ಸತ್ತಿಲ್ಲ. ಬದುಕಿದ್ದಾಳೆ ಎಂದು ಅಜಯ್ ತಿಳಿಸಿದ್ದಾನೆ. ಬಳಿಕ ಹಿಂದಿಯ ಕಬೂಲ್ ಹೆ ಸೀರಿಯಲ್ ನೋಡಿ ಪಾಯಲ್ ಹೆಣೆದ ಜಾಲ ಒಂದೊಂದಾಗಿ ವಿವರಿಸುತ್ತಾ ಹೋಗಿದ್ದು, ಪಾಯಲ್ ಮಾಸ್ಟರ್ ಮೈಂಡ್ ಗೆ ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ.

ಪಾಯಲ್ ತಂದೆ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೆ ಕಾರಣರಾದ ತನ್ನ ಅತ್ತೆ- ಮಾವನ ಮೇಲೆ ಪಾಯಲ್ ಗೆ ದ್ವೇಷ ಹುಟ್ಟಿತ್ತು. ಹೀಗಾಗಿಯೇ ಅವರನ್ನು ಕೊಲ್ಲಬೇಕೆಂದು ಆಕೆ ನಿರ್ಧರಿಸಿದ್ದಳು. ಹಾವು ಸಾಯಬೇಕು ಕೋಲು ಮುರಿಯಬಾರದು ಅನ್ನೋ ಹಾಗೆ ಅವರಿಬ್ಬರನ್ನು ಕೊಲ್ಲಬೇಕು. ಆದರೆ ತಾನು ಜೈಲು ಸೇರಬಾರದು ಎಂದು ಪಾಯಲ್ ಸ್ಕೆಚ್ ಹಾಕಿದ್ದಳು. ಹೀಗಾಗಿ ಎಲ್ಲಕ್ಕಿಂತ ಮೊದಲು ತಾನೇ ಸತ್ತಿದ್ದೇನೆಂದು ಎಲ್ಲರನ್ನೂ ನಂಬಿಸಿ, ಬಳಿಕ ತೆರೆಮರೆಯಲ್ಲಿ ನಿಂತು ಆಟವಾಡಲು ಆಕೆ ನಿರ್ಧರಿಸಿದ್ದಳು. ಈ ಎಲ್ಲಾ ಐಡಿಯಾಗಳು ಹೊಳೆದದ್ದು ಹಿಂದಿಯ ಕಬೂಲ್ ಹೆ ಸೀರಿಯಲ್ ನಿಂದ.

ಅಮಾಯಕ ಯುವತಿಯ ಕೊಲೆ ಯಾಕೆ..?

ಆದರೆ ದುರದೃಷ್ಟವಶಾತ್ ಈಕೆಯ ಹಗೆತನಕ್ಕೆ ಬಲಿಯಾಗಿದ್ದು ಹೇಮಲತಾ ಎಂಬ ಅಮಾಯಕ ಯುವತಿ. ತನ್ನಂತೆಯೇ ಕಾಣುತ್ತಿದ್ದ ಹೇಮಲತಾಳ ಜೊತೆ ಆತ್ಮೀಯತೆ ಬೆಳೆಸಿದ್ದ ಪಾಯಲ್ ಬದ್ಪುರದಲ್ಲಿರುವ ತನ್ನ ಮನೆಗೆ ಆಕೆಯನ್ನು ಕರೆಸಿಕೊಂಡಿದ್ದಳು. ಬಳಿಕ ಹೇಮಲತಾಳನ್ನು ಕೊಂದು, ಮೃತದೇಹದ ಪರಿಚಯ ಸಿಗದಂತೆ ಆಸಿಡ್ ಹಾಕಿ ಸುಟ್ಟು ಹಾಕಿದ್ದಳು. ಬಳಿಕ ಮೃತದೇಹದ ಪಕ್ಕದಲ್ಲಿ ತಾನೇ ಬರೆದ ಸೂಸೈಡ್ ನೋಟ್ ಇಟ್ಟಿದ್ದಾಳೆ. ಅಷ್ಟೆ ಅಲ್ಲದೇ ತನ್ನ ಬಟ್ಟೆಯನ್ನೇ ಹೇಮಲತಾಳಿಗೆ ತೊಡಿಸಿ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಎಲ್ಲರೂ ನಂಬುವಂತೆ ಮಾಡಿದ್ದಾಳೆ. ತನ್ನ ಸಹೋದರಿ ಸತ್ತಿದ್ದಾಳೆಂದು ಪಾಯಲ್ ಅಣ್ಣಂದಿರು ಆಕೆಯ ಅಂತ್ಯಸಂಸ್ಕಾರ ಕೂಡಾ ಮಾಡಿ ಮುಗಿಸಿದ್ದರು.

ಇದನ್ನೂ ಓದಿ: Mine collapse: ಛತ್ತೀಸ್‌ಗಢ ಗಣಿ ಕುಸಿತ: 4 ಸಾವು

ಹೇಮಲತಾ ಹತ್ಯೆ ಬಳಿಕ ತನ್ನ ಅತ್ತೆ- ಮಾವಂದಿರನ್ನು ಕೊಲ್ಲಲು ಪಾಯಲ್ ಸ್ಕೆಚ್ ಹಾಕಿದ್ದಳು. ತಾನೇ ಸತ್ತಿದ್ದೇನೆಂದು ನಂಬಿಸಿದರೆ ತಾನೇ ಕೊಲೆ ಮಾಡಿದ್ದೇನೆಂದು ಯಾರಿಗೂ ಅನುಮಾನ ಬರುವುದಿಲ್ಲ ಎಂದು ಪಾಯಲ್ ಹೈಡ್ರಾಮಾವನ್ನೇ ಮಾಡಿದ್ದಾಳೆ. ಇನ್ನೊಂದೆಡೆ ಪಾಯಲ್ ಹಾಗೂ ಅಜಯ್ ಮದುವೆಗೂ ಅಣ್ಣಂದಿರ ವಿರೋಧವಿತ್ತು. ಹೀಗಾಗಿ ಅತ್ತೆ- ಮಾವನನ್ನು ಕೊಂದ ಬಳಿಕ ಅಜಯ್ ನನ್ನು ಮದುವೆಯಾಗಿ ದೂರದೂರಿನಲ್ಲಿ ಬದುಕು ಕಟ್ಟಿಕೊಳ್ಳುವ ಆಸೆ ಕೂಡಾ ಪಾಯಲ್ ದಾಗಿತ್ತು. ಆದರೆ ಕೊನೆಗೂ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Fake suicide drama: Daughter made a big plan to take revenge for her parents suicide and for that she was inspired by Hindi serial

Comments are closed.