ಮಹಾರಾಷ್ಟ್ರ: ಜೀವನದಲ್ಲಿ ಒಂದೇ ಸಲ ಆಗೋ ಮದುವೆಯನ್ನು ವಿಭಿನ್ನವಾಗಿ ಸಂಭ್ರಮಿಸೋ ಖಯಾಲಿ ಇತ್ತೀಚಿಗೆ ಹೆಚ್ಚಾಗ್ತಿದೆ. ಆದರೆ ಈ ವಿಭಿನ್ನತೆ ಹೆಸರಿನಲ್ಲಿ ಹುಚ್ಚಾಟವಾಡೋ ವಧು-ವರರು ಕೊನೆಗೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಕಾರಿನ ಬಾನೆಟ್ ಮೇಲೆ ಕುಳಿತು ಮಂಟಪಕ್ಕೆ ಬಂದ ವಧು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಹಾರಾಷ್ಟ್ರ ಮೂಲದ ಶುಭಾಂಗಿ ಎಂಬ ಯುವತಿಗೆ ವಿಭಿನ್ನವಾಗಿ ಮದುವೆಯಾಗೋ ಕನಸಿತ್ತು. ಇದಕ್ಕಾಗಿ ಮಂಟಪಕ್ಕೂ ಸ್ಟೈಲಾಗಿ ಹೋಗೋ ಕನಸು ಕಂಡ ಶುಭಾಂಗಿ ಅಲಂಕೃತ ಕಾರಿನ ಒಳಗೆ ಕುಳಿತುಕೊಳ್ಳುವ ಬದಲು ವಧುವಿನ ಶೃಂಗಾರದಲ್ಲಿ ಕಾರಿನ ಬಾನೆಟ್ ಮೇಲೆ ಕುಳಿತು ಹೆದ್ದಾರಿಯಲ್ಲಿ ಪ್ರಯಾಣಿಸಿ ಮಂಟಪಕ್ಕೆ ಬಂದಿದ್ದಾಳೆ.

ಇಷ್ಟೇ ಆಗಿದ್ದರೇ ಶುಭಾಂಗಿ ಬಚಾವ್ ಆಗುತ್ತಿದ್ದರೇನೋ , ತಾವು ಮಾಡಿದ ಸಾಹಸದ ವಿಡಿಯೋವನ್ನು ಶುಭಾಂಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಮಹಾರಾಷ್ಟ್ರ ಪೊಲೀಸರು ಕಾರು, ಕಾರಿನ ಮಾಲೀಕರು ಹಾಗೂ ವಧು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಧು ಶುಭಾಂಗಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದರೇ, ಕಾರಿನಲ್ಲೂ ಹಲವರು ಕುಳಿತಿದ್ದರು. ಇವರೆಲ್ಲ ಹೆದ್ದಾರಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಪ್ರಯಾಣಿಸಿದ್ದಾರೆ. ವಧುವಿನ ಕಾರು ಪ್ರಯಾಣವನ್ನು ಮುಂದೇ ಬೈಕ್ ನಲ್ಲಿ ಕುಳಿತ ವಿಡಿಯೋಗ್ರಾಫರ್ ಚಿತ್ರೀಕರಿಸಿದ್ದಾನೆ.

ಸಂಚಾರಿ ನಿಯಮ ಉಲ್ಲಂಘನೆ, ಕೊರೋನಾ ನಿಯಮ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿರೋ ಮಹಾರಾಷ್ಟ್ರ ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ. ಒಟ್ಟಿನಲ್ಲಿ ವಿಭಿನ್ನವಾಗಿ ಮದುವೆಯಾಗೋ ಕನಸು ವಧುವನ್ನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಿದ್ದು, ಜನರು ಇದೆಲ್ಲಾ ಬೇಕಿತ್ತಾ ಅಂತ ಲೇವಡಿ ಮಾಡ್ತಿದ್ದಾರೆ.