ಮಂಗಳೂರು : Praveen Nettaru murder case : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಭೇದಿಸಿರುವ ದಕ್ಷಿಣ ಕನ್ನಡ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ತನಿಖೆಯ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಇಂದು ಬೆಳಗ್ಗೆ ನಾವು ಪ್ರವೀಣ್ ಹಂತಕರನ್ನು ಬಂಧಿಸಿದ್ದೇವೆ. ಇವರನ್ನು ತಲಪಾಡಿ ಚೆಕ್ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಇವರು ಇಷ್ಟುದಿನ ಎಲ್ಲಿ ಇದ್ದರು..? ಇವರಿಗೆ ಆಶ್ರಯ ನೀಡಿದವರು ಯಾರು ..? ಹೀಗೆ ಎಲ್ಲದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾವ ಉದ್ದೇಶಕ್ಕೆ ಪ್ರವೀಣ್ರನ್ನು ಕೊಲೆ ಮಾಡಲಾಗಿದೆ ಎಂಬುದನ್ನೂ ತನಿಖೆ ಮಾಡುತ್ತೇವೆ. ಪೊಲೀಸ್ ಕಸ್ಟಡಿಗೆ ಪಡೆದು ಮೂವರನ್ನು ಸಂಪೂರ್ಣ ತನಿಖೆಗೆ ಒಳಪಡಿಸಿ ಬಳಿಕ ಎನ್ಐಎಗೆ ಒಪ್ಪಿಸುತ್ತೇವೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಸುಳ್ಯದ ಸಿಯಾಬ್(33), ರಿಯಾಜ್ ಅಂಕತಡ್ಕ(27) ಹಾಗೂ ಬಶೀರ್ (29) ಎಂಬವರನ್ನು ಬಂಧಿಸಿದ್ದೇವೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಜನರಲ್ಲೂ ಆತಂಕ ಮೂಡಿತ್ತು .ಪ್ರಕರಣವನ್ನು ಭೇದಿಸಲು ನಮ್ಮ ಮೇಲೂ ಸಾಕಷ್ಟು ಒತ್ತಡವಿತ್ತು. ಹೀಗಾಗಿ ಶತಾಯಗತಾಯವಾಗಿ ಈ ಪ್ರಕರಣವನ್ನು ಭೇದಿಸಬೇಕಿತ್ತು. ಈ ಪ್ರಕರಣದ ತನಿಖೆಯಲ್ಲಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ .ಹೀಗಾಗಿ ಅಧಿಕಾರಿಗಳ ತಂಡಕ್ಕೆ ಬಹುಮಾನವನ್ನು ಘೋಷಿಸಲಿದ್ದೇವೆ ಎಂದು ಹೇಳಿದರು.
ಮೇಲ್ನೋಟಕ್ಕೆ ಆರೋಪಿಗಳಿಗೆ ಪಿಎಫ್ಐ ಹಾಗೂ ಎಸ್ಡಿಪಿಐ ನಂಟಿದೆ ಎಂಬುದು ತಿಳಿದು ಬಂದಿದೆ. ತನಿಖೆಯಲ್ಲಿ ಇದು ಇನ್ನೂ ಸಾಬೀತಾಗಬೇಕಿದೆ. ಈ ಮೂವರು ಕೃತ್ಯವನ್ನು ನಡೆಸಿ ಮೊದಲು ಕಾಸರಗೋಡಿನಲ್ಲಿರುವ ಮಸೀದಿಗೆ ತೆರಳಿದ್ದಾರೆ. ಈ ಕೊಲೆಯನ್ನು ನಡೆಸಲು ಕಪ್ಪು ಬಣ್ಣದ ಸ್ಪೆಂಡರ್ ಬೈಕ್ ಬಳಕೆ ಮಾಡಲಾಗಿದೆ. ರಿಯಾಜ್ ಕೋಳಿ ಸಪ್ಲೈ ಮಾಡುವ ಹೋಟೆಲ್ನಲ್ಲಿ ಬಶೀರ್ ಕೆಲಸ ಮಾಡುತ್ತಿದ್ದ . ಸಿಯಾಬ್ ಕ್ಯಾಂಪ್ಕೋ ಕಂಪನಿಗೆ ಕೊಕೊ ಪೂರೈಕೆದಾರನಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.
ಈ ಕೊಲೆಯನ್ನು ನಡೆಸಲು ಬೈಕ್ ಮಾತ್ರವಲ್ಲದೇ ಕಾರು ಕೂಡ ಬಳಕೆಯಾಗಿದೆ. ಕೃತ್ಯಕ್ಕೆ ಬಳಕೆ ಮಾಡಲಾದ ಪ್ರತಿಯೊಂದು ವಸ್ತುವನ್ನೂ ವಶಕ್ಕೆ ಪಡೆಯುತ್ತೇವೆ.ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ನಾವು ಬಂಧಿಸಿಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದ ಯಾರೊಬ್ಬರನ್ನೂ ನಾವು ಬಿಡುವುದಿಲ್ಲ. ನಮ್ಮ ತನಿಖೆಗೆ ಜಾತಿ – ಧರ್ಮವೆಂಬ ಬಣ್ಣವಿಲ್ಲ ಎಂದು ಹೇಳಿದರು.
ಈ ಹಂತಕರಿಗೆ ಪ್ರವೀಣ್ ಹೇಗೆ ಟಾರ್ಗೆಟ್ ಆಗಿದ್ದ ಎನ್ನುವುದು ತನಿಖೆಯಲ್ಲಿ ತಿಳಿಯಬೇಕಿದೆ. ಅಲ್ಲದೆ ಈ ಮೂವರಿಗೆ ಆಶ್ರಯ ನೀಡಿದ್ದು ಯಾರು ಎಂಬುದನ್ನೂ ನಾವು ತಿಳಿದುಕೊಳ್ಳುತ್ತೇವೆ. ಈಗಾಗಲೇ ಪ್ರಕರಣ ಸಂಬಂಧ ಐದಾರು ವಾಹನಗಳನ್ನು ಸೀಜ್ ಮಾಡಿದ್ದೇವೆ . ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿದ್ದರೂ ಅವರಿಗೆ ಬಂಧನ ತಪ್ಪಿದ್ದಲ್ಲ ಎಂದು ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ಇದನ್ನು ಓದಿ : river fishes : ಕಡಲ ತೀರದಲ್ಲಿ ಮೀನಿನ ಸುಗ್ಗಿ : ರಾತ್ರಿಯಿಡೀ ಮೀನಿಗಾಗಿ ಸಮುದ್ರದಲ್ಲೇ ಕುಳಿತ ಮತ್ಸ್ಯಪ್ರಿಯರು
ಇದನ್ನೂ ಓದಿ : man tried to commit suicide : ಅರುಂಧತಿ ಸಿನಿಮಾದಿಂದ ಪ್ರೇರಣೆ ಪಡೆದು ಯುವಕನ ಹುಚ್ಚಾಟ:ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
Praveen Nettaru murder case: ADGP Alok Kumar press conference