ದಕ್ಷಿಣ ಕನ್ನಡ : Praveen Nettaru murder case : ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ದಕ್ಷಿಣ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ವಿಶೇಷ ತಂಡವು ಪ್ರಕರಣ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೃತ್ಯ ಎಸಗಿದ್ದಾರೆ ಎನ್ನಲಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ಈ ಸಂಬಂಧ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮಧ್ಯಾಹ್ನ 12:30ಕ್ಕೆ ಸಭೆ ಕರೆದು ಅಧಿಕೃತ ಮಾಹಿತಿ ನೀಡಲಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಎಡಿಜಿಪಿ ಅಲೋಕ್ ಕುಮಾರ್ ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿದ್ದರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕೊಲೆ ಪ್ರಕರಣದ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ ಎನ್ನಲಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಈ ಹಿಂದೆ ಪ್ರವೀಣ್ ಹತ್ಯೆಯನ್ನು ಸ್ಥಳೀಯರೇ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದರು, ತನಿಖೆ ವೇಳೆಯಲ್ಲಿಯೂ ಈ ವಿಚಾರ ದೃಢಪಟ್ಟಿದೆ. ಈ ಹತ್ಯೆಯನ್ನು ನಡೆಸಲು ಸುಳ್ಯದ ಕಬೀರ್ ಎಂಬಾತ ತನ್ನ ಪರಿಚಯಸ್ಥರಿಂದ ಬೈಕ್ ಪಡೆದು ಆರೋಪಿಗಳಿಗೆ ನೀಡಿದ್ದ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಆಗಸ್ಟ್ 9ರಂದು ಪೊಲೀಸರು ಕಬೀರ್ನನ್ನು ಬಂಧಿಸಿದ್ದರು.
ಕೃತ್ಯಕ್ಕೆ ಬಳಕೆ ಮಾಡಲಾದ ಬೈಕ್ ಕರ್ನಾಟಕದ ರಿಜಿಸ್ಟ್ರೇಷನ್ ಹೊಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದ್ದು ಗೌಪ್ಯ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರವೀಣ್ನನ್ನು ಹತ್ಯೆಗೈದ ಆರೋಪಿಗಳು ಕೇರಳಕ್ಕೆ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ಶಿಯಾಬ್, ರಿಯಾಜ್ ಹಾಗೂ ಬಶೀರ್ ಎಂದು ಗುರುತಿಸಲಾಗಿದೆ. ಈ ಮೂವರು ಬೆಳ್ಳಾರೆಯ ಆಸುಪಾಸಿನ ನಿವಾಸಿಗಳೇ ಆಗಿದ್ದಾರೆ. ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಸೂದ್ ಜುಲೈ 21ರಂದು ಮೃತಪಟ್ಟಿದೆ. ಅಂದೇ ಆರೋಪಿಗಳು ಹಿಂದೂ ಧರ್ಮದ ಯುವಕನನ್ನು ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಹೊಂಚು ಹಾಕಿದ್ದರು. ಅದರಂತೆ ಜುಲೈ 26ರ ರಾತ್ರಿ 8:30ರ ಸುಮಾರಿಗೆ ಪ್ರವೀಣ್ನನ್ನು ಹತ್ಯೆಗೈದಿದ್ದಾರೆ.
ಈ ಕೊಲೆಯನ್ನು ನಡೆಸಲು ಆರೋಪಿಗಳು ಒಂದು ವಾರಗಳ ಕಾಲ ತಯಾರಿ ನನಡೆಸಿದ್ದರು. ಸಂಘ ಪರಿವಾರದ ಯುವಕನನ್ನೇ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕು ಎನ್ನುವುದು ಹಂತಕರ ಸ್ಕೆಚ್ ಆಗಿತ್ತು. ಈ ಸಂದರ್ಭದಲ್ಲಿ ಕೋಳಿ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹಂತಕರ ಕಣ್ಣಿಗೆ ಬಿದ್ದಿದ್ದರು. ಹೀಗಾಗಿ ಪ್ರವೀಣ್ ಮೇಲೆ ಗುರಿಯಿಟ್ಟಿದ್ದ ಹಂಕತರು ಆತನ ಮೇಲೆ ತಲವಾರ್ನಿಂದ ದಾಳಿ ನಡೆಸಿದ ಕೊಲೆಗೈದಿದ್ದರು.
ಇನ್ನು ಈ ಕೃತ್ಯವನ್ನು ನಡೆಸಲು ಹಳೆಯ ಸ್ಪ್ಲೆಂಡರ್ ಬೈಕ್ ಬಳಕೆ ಮಾಡಲಾಗಿತ್ತು. ಹಂತಕರಿಗೆ ಬಂಧಿತ ಆರೋಪಿ ಕಬೀರ್ ಪರಿಚಯಸ್ಥರೊಬ್ಬರ ನಂಬರ್ ಪ್ಲೇಟ್ ಅಸ್ಪಷ್ಟವಾಗಿದ್ದ ಬೈಕ್ನ್ನು ತೆಗೆದುಕೊಂಡು ನೀಡಿದ್ದ. ಪ್ರವೀಣ್ನನ್ನು ಹತ್ಯೆಗೈದ ಬಳಿಕ ಆರೋಪಿಗಳು ಕೇರಳಕ್ಕೆ ಎಸ್ಕೇಪ್ ಆಗಿದ್ದರು. ಮೊದಲು ಕೇರಳದ ತಲಶೇರಿ ಬಳಿಕ ಕಣ್ಣೂರು, ಅದಾದ ನಂತರ ಮಲಪುರಂ ಹೀಗೆ ಹದಿನೈದು ದಿನಗಳಲ್ಲಿ ಏಳು ಕಡೆಗಳಲ್ಲಿ ಅಡಗಿಕೊಂಡಿದ್ದರು. ಹಂತಕರ ಪತ್ತೆಗೆ ಬಲೆ ಬೀಸಿದ್ದ ಎಡಿಜಿಪಿ ಅಲೋಕ್ ಕುಮಾರ್, ಮೊದಲು ಹಂತಕರ ಆಪ್ತರನ್ನು ಖೆಡ್ಡಾಗೆ ಕೆಡವಿದ್ದರು. ಹಂತಕರಿಗೆ ಪರೋಕ್ಷ ಹಾಗೂ ಪ್ರತ್ಯಕ್ಷ ಸಾಥ್ ನೀಡಿದವರ ಆಸ್ತಿ ಮುಟ್ಟುಗೋಲಿನ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು. ಹದಿನೈದು ದಿನಗಳ ಅಂತರದಲ್ಲಿ ಐದು ಬಾರಿ ಬೆಳ್ಳಾರೆಗೆ ಭೇಟಿ ನೀಡಿದ್ದರು. ಹಂತಕರಿಗೆ ಆಶ್ರಯ ನೀಡಿದವರಿಗೆ ಸಾಕಷ್ಟು ನಡುಕ ಹುಟ್ಟಿಸಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : Shilpa Shetty broke her leg: ಶೂಟಿಂಗ್ ವೇಳೆ ಅವಘಡ: ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ
ಇದನ್ನೂ ಓದಿ : Green expressway highway : ಬೆಂಗಳೂರಿನಿಂದ ಚೆನ್ನೈಗೆ ಇನ್ನು ಕೇವಲ 2 ಗಂಟೆ ಪ್ರಯಾಣ
Praveen Nettaru murder case : Main accused arrested