Independence Day 2022 : ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿದೆ ಕಡಲ ನಗರಿಯ ಈ ಕಟ್ಟೆ

ಮಂಗಳೂರು : Independence Day 2022 : ದೇಶವು 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹೊಸ್ತಿಲಿನಲ್ಲಿದೆ. ಕೇಂದ್ರ ಸರ್ಕಾರವು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಮನೆ ಮನೆಯಲ್ಲಿಯೂ ತಿರಂಗಾ, ಸೋಶಿಯಲ್​ ಮೀಡಿಯಾದ ವೇದಿಕೆಗಳಲ್ಲಿ ಪ್ರೊಫೈಲ್​ ಫೋಟೋಗಳನ್ನು ತ್ರಿವರ್ಣ ಧ್ವಜದ ಫೋಟೋದೊಂದಿಗೆ ಬದಲಿಸುವಂತೆ ಕರೆ ನೀಡಿದೆ. ಹಿಂದೆ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಕ್ಷಿಯಾದ ಸಾಕಷ್ಟು ಸ್ಥಳಗಳು ನಮ್ಮ ರಾಜ್ಯದಲ್ಲಿಯೂ ಸಹ ಇದೆ. ಅದರಂತೆಯೇ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ರೈತರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಟ್ಟೆಯೊಂದು ಈಗಲೂ ಮಂಗಳೂರಿನಲ್ಲಿದೆ.


ಮಂಗಳೂರು ನಗರ ವ್ಯಾಪ್ತಿಯಲ್ಲಿಯೇ ಬರುವ ಬಿಕರ್ಣಕಟ್ಟೆಯು ಎರಡು ಶತಮಾನಗಳ ಹಿಂದೆ ಅನೇಕ ರಕ್ತ ಸಿಕ್ತ ಇತಿಹಾಸಗಳಿಗೆ ಸಾಕ್ಷಿಯಾಗಿತ್ತು. ಇಲ್ಲಿರುವ ಕಟ್ಟೆಯೊಂದರಲ್ಲಿ ಬ್ರಿಟೀಷರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿ ಬಳಿಕ ಅವರ ಮೃತದೇಹವನ್ನು ಕಾಗೆ, ಹದ್ದುಗಳಿಗೆ ತಿನ್ನಲು ಬಿಡುತ್ತಿದ್ದರಂತೆ..! ಇನ್ನೂರು ವರ್ಷಗಳ ಹಿಂದೆ ಇಂತಹದ್ದೊಂದು ರಣಭೀಕರ ಸ್ಥಳವಾಗಿದ್ದ ಈ ಊರು ಕ್ರಮೇಣವಾಗಿ ಫ್ಲೈಓವರ್​, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಎಲ್ಲೋ ಮರೆಯಾಗಿ ಹೋಯ್ತು. ಆದರೆ ಈ ನ್ಯಾಯ ಕಟ್ಟೆ ಮಾತ್ರ ಈಗಲೂ ಹಾಗೆ ಇದೆ. ಈ ಕಟ್ಟೆಯ ಮೇಲೆ ಕೂರಲು ಅಥವಾ ಇಲ್ಲಿರುವ ಅಶ್ವತ್ಥ ಮರದ ಮೇಲೆ ಹತ್ತಲು ಈಗಲೂ ಯಾರಿಗೂ ಅನುಮತಿಯಿಲ್ಲ.


ಟಿಪ್ಪು ಸುಲ್ತಾನ್ ಮರಣದ ಬಳಿಕ ಮೈಸೂರನ್ನು ವಶಪಡಿಸಿಕೊಂಡಿದ್ದ ಬ್ರಿಟೀಷರು ಉಪ್ಪು ಹಾಗೂ ಹೊಗೆಸೊಪ್ಪಿಗೆ ಸುಂಕ ಹೇರಿದರು. ಇದನ್ನು ವಿರೋಧಿಸಿ 1837ರಲ್ಲಿ ಕೆದಂಬಾಡಿ ರಾಮಯ್ಯ ಗೌಡ ಮತ್ತು ನಂಜಯ್ಯ ನೇತೃತ್ವದಲ್ಲಿ ಅಮರ ಸುಳ್ಯ ರೈತ ದಂಗೆ ಆರಂಭಿಸಲಾಯ್ತು. ಪುಟ್ಟಬಸಪ್ಪ ಎಂಬಾತನಿಗೆ ರಾಜಪೋಷಾಕು ಹಾಕಿ ಕಲ್ಯಾಣಸ್ವಾಮಿ ಎಂದು ಮರು ನಾಮಕರಣ ಮಾಡಲಾಗಿತ್ತು. ಸುಳ್ಯದಿಂದ ಬ್ರಿಟೀಷರನ್ನು ಸೋಲಿಸುತ್ತಾ ಹೊರಟ ಈ ರೈತರ ಗುಂಪು 1837ರ ಏ.5ರ ವೇಳೆಗೆ ಮಂಗಳೂರು ತಲುಪಿತ್ತು.

ಕಲ್ಯಾಣ ಸ್ವಾಮಿಗೆ ಪಟ್ಟಾಭಿಷೇಕ ಮಾಡಿ ಸುಂಕ ರದ್ದುಗೊಳಿಸುವ ಆದೇಶವನ್ನು ಹೊರಡಿಸಲಾಯ್ತು. ಆದರೆ ಇದನ್ನು ಸಹಿಸಲು ಬ್ರಿಟೀಷರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಪಟ್ಟಾಭಿಷೇಕ ನಡೆದ ಕೇವಲ 2 ವಾರಗಳಲ್ಲಿ ರೈತರ ವಿರುದ್ಧ ಯುದ್ಧ ಸಾರಿದರು. ಈ ಯುದ್ಧದಲ್ಲಿ ಕೆದಂಬಾಡಿ ರಾಮಪ್ಪ, ಹುಲಿಕುಂದ ನಂಜಯ್ಯ ಹುತಾತ್ಮರಾದರು. ನಂದಾವರ ಬಂಗರಸುವನ್ನು 1837ರ ಮೇ 27ರಂದು, ಕಲ್ಯಾಣ ಸ್ವಾಮಿ ಮತ್ತು ಉಪ್ಪಿನಂಗಡಿಯ ಮಂಜಪ್ಪರನ್ನು ಜೂ.19ರಂದು ಹಾಗೂ ಗುಡ್ಡೆಮನೆ ಅಪ್ಪಯ್ಯರನ್ನು ಅ.31ರಂದು ಇದೇ ಬಿಕರ್ಣಕಟ್ಟೆಯಲ್ಲಿ ಗಲ್ಲಿಗೇರಿಸಲಾಗಿತ್ತು.


ಬ್ರಿಟೀಷರ ವಿರುದ್ಧ ದಂಗೆ ಏಳಲು ಇನ್ನೊಬ್ಬ ರೈತ ಕೂಡ ಧೈರ್ಯ ತೋರಬಾರದು .ಆ ರೀತಿಯಾದ ನಡುಕ ಜನರಲ್ಲಿ ಹುಟ್ಟಿಸಬೇಕೆಂದು ಗಲ್ಲಿಗೇರಿಸಿದವರ ಹೆಣವನ್ನೂ ಸುಡದೇ ಕಾಗೆ, ಹದ್ದುಗಳು ತಿನ್ನುವಂತೆ ಅದನ್ನು ಎಸೆಯಲಾಗಿತ್ತು. ಹೀಗಾಗಿ ಈ ಕಟ್ಟೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಸಂಕೇತವಾಗಿ ಇನ್ನೂ ಇದೆ.

ಇದನ್ನು ಓದಿ : Green expressway highway : ಬೆಂಗಳೂರಿನಿಂದ ಚೆನ್ನೈಗೆ ಇನ್ನು ಕೇವಲ 2 ಗಂಟೆ ಪ್ರಯಾಣ

ಇದನ್ನೂ ಓದಿ : Praveen Nettaru murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಮೂವರು ಪ್ರಮುಖ ಆರೋಪಿಗಳ ಬಂಧನ

Independence Day 2022 : This place has a dark history of freedom struggle

Comments are closed.