Praveen Nettaru murder case: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್‌ಐ ನಂಟು ಹೊಂದಿರುವ 20 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಮಂಗಳೂರು : (Praveen Nettaru murder case) ರಾಷ್ಟ್ರದ ಗಮನ ಸೆಳೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆಯನ್ನು ಚುರುಕುಗೊಳಿಸಿದೆ. ಇದೀಗ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಪಿಎಫ್ಐ ಜೊತೆಗೆ ನಂಟು ಹೊಂದಿರುವ 20 ಮಂದಿ ಆರೋಪಿಗಳ ವಿರುದ್ದ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜುಲೈ 2022 ರ ಜುಲೈ 26 ರಂದು ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆಗೆ ಸಂಪರ್ಕ ಹೊಂದಿರುವ 20 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ.

ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ಮತ್ತು 2047 ರ ವೇಳೆಗೆ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶವನ್ನು ಇಟ್ಟುಕೊಂಡಿರುವ ಪಿಎಫ್ಐ ಅಲ್ಲಲ್ಲಿ ರಹಸ್ಯ ತಂಡಗಳನ್ನು ರಚಿಸಿತ್ತು. ಅಲ್ಲದೇ ಹಿಂಸಾಚಾರ ಸೃಷ್ಟಿಸಲು ತಂಡವೊಂದನ್ನು ರಚಿಸಿ, ತಂಡದ ಸದಸ್ಯರಿಗೆ ತರಬೇತಿಯ ಜೊತೆಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿರುವ ಇದೀಗ ಆರೋಪ ಕೇಳಿಬಂದಿದೆ. ಇನ್ನು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ(Praveen Nettaru murder case)ಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಸುಳ್ಯ ಟೌನ್ ಮತ್ತು ಬೆಳ್ಳಾರೆ ಗ್ರಾಮದಲ್ಲಿ ಪಿಎಫ್‌ಐ ಸದಸ್ಯರು ಮತ್ತು ಮುಖಂಡರ ಪಿತೂರಿ ಸಭೆಗಳನ್ನು ನಡೆಸಿದ್ದರು ಅನ್ನೋದು ತನಿಖೆಯಿಂದ ಬಯಲಾಗಿದೆ. ಅಲ್ಲದೇ ಸಭೆಯಲ್ಲಿ ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್ ಅವರಿಗೆ ಹಿಂದೂ ಸಮಾಜದ ಯಾವ ವ್ಯಕ್ತಿಯನ್ನು ಟಾರ್ಗೆಟ್ ಮಾಡಬೇಕು ಎಂಬ ಕುರಿತು ಮಾಹಿತಿ ನೀಡುವಂತೆಯೂ ತಿಳಿಸಲಾಗಿತ್ತು.

ಸಭೆಯ ನಿರ್ಣಯದಂತೆ ನಾಲ್ವರನ್ನು ಗುರುತಿಸಲಾಗಿತ್ತು. ಜುಲೈ 2022 ರಲ್ಲಿ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನೇ ಟಾರ್ಗೆಟ್ ಮಾಡಲಾಗಿತ್ತು. ಅಲ್ಲದೇ ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟಿಸುವ ಸಲುವಾಗಿ ಪ್ರವೀಣ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋದು ಎನ್ಐಎ ತನಿಖೆಯಿಂದ ಬಯಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಭಾರತೀಯ ದಂಡನೆಯ ಸೆಕ್ಷನ್ 120B (ಕ್ರಿಮಿನಲ್ ಪಿತೂರಿಯ ಶಿಕ್ಷೆ), 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 302 (ಕೊಲೆಗೆ ಶಿಕ್ಷೆ) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಕೋಡ್ ಮತ್ತು ಯುಎ (ಪಿ) ಕಾಯಿದೆ, 1967 ರ ಸೆಕ್ಷನ್ 16, 18 ಮತ್ತು 20, ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 25(1)(ಎ). ಪ್ರವೀಣ್ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ಇದೀಗ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

ಸುಳ್ಯ ಪಟ್ಟಣದ ಮಹಮ್ಮದ್ ಶಿಯಾಬ್, ಸುಳ್ಯ ತಾಲೂಕಿನ ಅಬ್ದುಲ್ ಬಶೀರ್, ಪಾಲ್ತಾಡಿಯ ರಿಯಾಝ್, ಸುಳ್ಯ ತಾಲೂಕಿನ ಮುಸ್ತಫಾ ಪೈಚಾರ್, ನೆಕ್ಕಿಲಾಡಿಯ ಮಸೂದ್ ಕೆ.ಎ, ಬಂಟ್ವಾಳದ ಕೊಡಾಜೆ ಮೊಹಮ್ಮದ್ ಶೆರೀಫ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್, ಸುಳ್ಯ ತಾಲೂಕಿನ ಇಸ್ಮಾಯಿಲ್ ಕೆ. ಬೆಳ್ಳಾರೆ ಗ್ರಾಮ, ಬೆಳ್ಳಾರೆ ಗ್ರಾಮದ ಕೆ ಮಹಮ್ಮದ್ ಇಕ್ಬಾಲ್, ಮಂಗಳಂತಿಯ ಶಹೀದ್ ಎಂ, ಬೆಳ್ಳಾರೆಯ ಮಹಮ್ಮದ್ ಶಫೀಕ್, ಸುಳ್ಯದ ಉಮ್ಮರ್ ಫಾರೂಕ್ ಎಂಆರ್, ಮಸಿದಿಯ ಅಬ್ದುಲ್ ಕಬೀರ್, ನೆಲ್ಲೂರುಕೆಮರಾಜೆ ಗ್ರಾಮದ ಮುಹಮ್ಮದ್ ಇಬ್ರಾಹಿಂ ಶಾ, ನಾವೂರಿನ ಸೈನುಲ್ ಅಬಿದ್ ವೈ, ಶೇಖ್ ಸದ್ದಾಂ ಹುಸೇನ್ ಗ್ರಾಮದ ಶೇಖ್ ಸದ್ದಾಂ ಹುಸೇನ್ , ಸವಣೂರಿನ ಝಕಿಯಾರ್ ಎ, ಬೆಳ್ಳಾರೆ ಗ್ರಾಮದ ಎನ್ ಅಬ್ದುಲ್ ಹಾರಿಸ್ ಮತ್ತು ಮಡಿಕೇರಿಯ ತುಫೈಲ್ ಎಂ.ಎಚ್. ಸೇರಿದಂತೆ 20 ಮಂದಿಯ ವಿರುದ್ದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಇದನ್ನೂ ಓದಿ : Hit and drag case: ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ. ಎಳೆದೊಯ್ದ ಕಾರು ಚಾಲಕಿ

ಇದನ್ನೂ ಓದಿ : Drug case- 9 suspended: ಮಂಗಳೂರು ಡ್ರಗ್ಸ್‌ ಪ್ರಕರಣ: 2 ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು

ಉಳಿದಂತೆ ಆರೋಪಿಗಳಾದ ಮುಸ್ತಫಾ ಪೈಚಾರ್, ಮಸೂದ್ ಕೆಎ, ಕೊಡಾಜೆ ಮೊಹಮ್ಮದ್ ಶೆರೀಫ್, ಅಬೂಬಕ್ಕರ್ ಸಿದ್ದಿಕ್, ಉಮ್ಮರ್ ಫಾರೂಕ್ ಎಂಆರ್ ಮತ್ತು ತುಫೈಲ್ ಎಂಎಚ್ ಪರಾರಿಯಾಗಿದ್ದು, ಅವರ ಕುರಿತು ಮಾಹಿತಿ ನೀಡಿದವರಿಗೆ ತಲಾ ೫ ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್ಐಎ ಘೋಷಣೆ ಮಾಡಿದೆ. ಜುಲೈ 26, 2022 ರಂದು ಬೆಳ್ಳಾರೆಯ ನಿವಾಸಿಯಾಗಿದ್ದ ಬಿಜೆಪಿಯ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಹತ್ಯೆ ಮಾಡಿದ್ದರು. ಇದೀಗ ಎನ್‌ಐಎ ತನಿಖೆಯಲ್ಲಿ, ಸೇಡು ತೀರಿಸಿಕೊಳ್ಳಲು ಮತ್ತು ಸಮಾಜದ ಜನರಲ್ಲಿ ಭಯಭೀತರಾಗಲು ನೆಟ್ಟಾರು ಹತ್ಯೆಗೆ ಪಿಎಫ್‌ಐ ಮುಖಂಡರು ಮತ್ತು ಸದಸ್ಯರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಳೆದ ವರ್ಷ ಜುಲೈ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ ರಾಜ್ಯ ಸರಕಾರ ಪ್ರಕರಣವನ್ನು ಆಗಸ್ಟ್ 4 ರಂದು ಎನ್‌ಐಎ ತನಿಖೆಗೆ ವಹಿಸಿತ್ತು.

Praveen Nettaru murder case: NIA chargesheet against 20 accused with PFI links

Comments are closed.