ಬೆಂಗಳೂರು : ಮೊಬೈಲ್ ಪೋನ್ ಚಾರ್ಜ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು, ಯುವಕನೋರ್ವನ ಕೊಲೆಯಲ್ಲಿ ಚಾರ್ಜ್‌ರ್ ಕಿತ್ತಾಟ ಅಂತ್ಯ ಕಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ಅನಿಲ್ ಎಂಬಾತನೇ ಕೊಲೆಯಾದ ಯುವಕ. ಅನಿಲ್ ಸ್ನೇಹಿತನಾಗಿದ್ದ ಆಕಾಶ್ ಎಂಬಾತನೇ ಕೊಲೆ ಮಾಡಿದ ಆರೋಪಿ. ಮಧ್ಯಪ್ರದೇಶ ಮೂಲದ ಇಬ್ಬರೂ ಕೂಡ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಶುರುವಾಗಿದೆ.
ತಮ್ಮ ಮೊಬೈಲ್ ಚಾರ್ಜ್ ಹಾಕಲು ಒಂದೇ ಸ್ವಿಚ್ ಬಳಕೆ ಮಾಡುತ್ತಿದ್ದರು. ಇದೇ ವಿಚಾರಕ್ಕೆ ಕಿತ್ತಾಟ ಶುರುವಾಗಿದ್ದು, ಆಕಾಶ್ ಕೋಲಿನಿಂದ ಹೊಡೆದು ಅನಿಲ್‌ನನ್ನು ಕೊಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅನಿಲ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ. ಈ ಕುರಿತು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.