Udupi College Toilet Video Case : ಕಾಲೇಜು ಶೌಚಾಲಯದಲ್ಲಿ ವಿಡಿಯೋ ಪ್ರಕರಣ : ಅಗಸ್ಟ್‌ 1ಕ್ಕೆ ಉಡುಪಿಗೆ ಸಿಎಂ ಸಿದ್ದರಾಮಯ್ಯ

ಉಡುಪಿ : ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಶೂಟಿಂಗ್‌ ಪ್ರಕರಣ (Udupi College Toilet Video Case) ಇದೀಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಒಂದೆಡೆಯಲ್ಲಿ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಬೃಹತ್‌ ಹೋರಾಟವನ್ನು ನಡೆಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಭಾರೀ ಆಕ್ರೋಶವೂ ವ್ಯಕ್ತವಾಗುತ್ತಿದೆ. ಈ ನಡುವಲ್ಲೇ ಸಿಎಂ ಸಿದ್ದರಾಮಯ್ಯ ಅವರು ಉಡುಪಿ ಜಿಲ್ಲೆಗೆ ಅಗಸ್ಟ್‌ 1ಕ್ಕೆ ಭೇಟಿ ನೀಡಲಿರುವುದು ತೀವ್ರ ಕುತೂಹಲ ಮೂಡಿಸಿದೆ.

ಉಡುಪಿ ಕಾಲೇಜಿನ ವಿಡಿಯೋ ಪ್ರಕರಣ ಈಗಾಗಲೇ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಸಿಡಬ್ಲ್ಯಸಿ ಸದಸ್ಯೆ ಖುಷ್ಬು ಸುಂದರ್‌ ಕೂಡ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ಆದರೆ ಪೊಲೀಸ್‌ ಇಲಾಖೆ ವಿದ್ಯಾರ್ಥಿಗಳ ಮೊಬೈಲ್‌ನಲ್ಲಿ ವಿಡಿಯೋ ಇಲ್ಲ ಅನ್ನೋ ಮಾಹಿತಿ ನೀಡಿರುವುದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ನ್ಯಾಯಾಲಯ ಈಗಾಗಲೇ ಮೂವರು ಆರೋಪಿತ ವಿದ್ಯಾರ್ಥಿನಿಯರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು.

ಕಳೆದ ಒಂದು ವಾರದಿಂದಲೂ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಹಾನಿ ಉಂಟಾಗಿತ್ತು. ಜೊತೆಗೆ ಉಡುಪಿ ಕಾಲೇಜು ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಿಂದ ರಸ್ತೆ ಮಾರ್ಗದ ಮೂಲಕ ನೇರವಾಗಿ ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಪಗ್ರತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ಆದರೆ ಮಧ್ಯಾಹ್ನ ೩.೩೦ರ ವರೆಗೂ ಉಡುಪಿ ಜಿಲ್ಲೆಯಲ್ಲಿಯೇ ಇರುವ ಮುಖ್ಯಮಂತ್ರಿಗಳು ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ.

ಉಡುಪಿಯ ಕಾಲೇಜಿನಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ. ಕರಾವಳಿ ಪ್ರವಾಸದ ವೇಳೆಯಲ್ಲಿ ಸಿಎಂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಇದನ್ನೂ ಓದಿ : Arishinagundi Falls : ಕೊಲ್ಲೂರಿನ ಅರಶಿನಗುಂಡಿ ಫಾಲ್ಸ್‌ನಲ್ಲಿ ಶರತ್‌ ಮೃತದೇಹ ಪತ್ತೆ

ಅಜ್ಞಾತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್‌

ಉಡುಪಿ ಕಾಲೇಜು ವಿಡಿಯೋ ಶೂಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಗೃಹ ಸಚಿವರು ಹಾಗೂ ಪೊಲೀಸ್‌ ಆಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಇದೀಗ ಸಭೆಯ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಒಂದೇ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಉಡುಪಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಾರೆ ಅನ್ನೋ ಮಾತು ಕೇಳಿಬಂದಿದೆ.

Udupi College Toilet Video Case: Video Case in College Toilet: CM Siddaramaiah to Udupi on August 1

Comments are closed.