ಮಂಗಳೂರು : ಬಾಂಬ್ ಪತ್ತೆಯಾದ ಬೆನ್ನಲ್ಲೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಬಾಂಬ್ ಪತ್ತೆಯಾಗಿರೋ ಟಿಕೆಟ್ ಕೌಂಟರ್, ಬಾಂಬ್ ಸ್ಪೋಟಗೊಳಿಸಿ ನಿಷ್ಕ್ರೀಯಗೊಳಿಸಿರೊ ಕೆಂಜಾರು ಮೈದಾನಕ್ಕೂ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ. ಸಿಸಿ ಟಿವಿಯನ್ನು ಶಂಕಿತ ವ್ಯಕ್ತಿಯ ಚಲನವಲನವನ್ನು ಪರಿಶೀಲಿಸಿದ್ದಾರೆ. ಶಂಕಿತ ವ್ಯಕ್ತಿ ವಿಮಾನ ನಿಲ್ದಾಣವನ್ನು ಪ್ರವೇಶಿಸಿರೋ ಆಟೋ ಚಾಲಕನಿಂದಲೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೇ ಶಂಕಿತ ವ್ಯಕ್ತಿ ಶೇವಿಂಗ್ ಮಾಡಿರೋ ಸಲೂನ್ ಮಾಲಕರಿಂದಲೂ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ.
ಬೆಳಗಿನಿಂದಲೇ ವಿಮಾನ ನಿಲ್ದಾಣಕ್ಕೆ ಆಗಮಿಸೋ ಎಲ್ಲಾ ವಾಹನಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ವಾಹನದ ಸಂಖ್ಯೆ, ವಾಹನ ಚಾಲಕರ ಹೆಸರು, ಮಾಲೀಕರ ವಿಳಾಸವನ್ನು ನಮೂದಿಸಿಕೊಳ್ಳಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಬರೋ ಪ್ರಯಾಣಿಕರನ್ನೂ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಿನ್ನೆ ಕೆಂಜಾರು ಭಾಗದಲ್ಲಿ ತಪಾಸಣೆ ನಡೆಸಲಾಗುತ್ತಿದ್ರೆ, ಇಂದು ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾ, ಟಿಕೆಟ್ ಕೌಂಟರ್, ಟೋಲ್ ಗೇಟ್ ಭಾಗಗಳಲ್ಲಿಯೂ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಾಂಬ್ ಪತ್ತೆಯಾಗಿರೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿಂದೆಯೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಉಗ್ರರ ಬೆದರಿಕೆಯಿದ್ದು, ಈ ಕೃತ್ಯವೂ ಕೂಡ ಉಗ್ರರದ್ದಾ ಅನ್ನೋ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ! ಎನ್ಐಎ ತಂಡ ಹಾಗೂ ಪೊಲೀಸರಿಂದ ತನಿಖೆ
- Advertisement -