Retrograde Mercury: ಬುಧನ ವಕ್ರಗತಿಯ ಚಲನೆ ಆರಂಭ; ಸಂವಹನ-ಸಂವಾದಗಳಲ್ಲಿ ಎಚ್ಚರಿಕೆ ಅತ್ಯಗತ್ಯ – ಸಂಪರ್ಕ ಸಾಧನಗಳೂ ತೊಂದರೆ ಕೊಡಬಹುದು

ಗ್ರಹಗಳ ವಕ್ರತ್ವ ಅಥವಾ ವಕ್ರಗತಿಯ ಚಲನೆ ಎಂದರೇನು? (Retrograde Mercury in Transit) ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಸೌರವ್ಯೂಹದಲ್ಲಿ ಸೂರ್ಯ ಮತ್ತು ಚಂದ್ರರು ಪ್ರಕಾಶ ಗ್ರಹಗಳು. ಸೂರ್ಯನು ತನ್ನದೇ ಬೆಳಕನ್ನು ನೀಡಬಲ್ಲನಾದರೆ ಚಂದ್ರನು ಸೂರ್ಯನಿಂದ ಬರುವ ಬೆಳಕನ್ನು ಪ್ರತಿಫಲಿಸುವ ಮೂಲಕ ಬೆಳಕನ್ನು ಭೂಮಿಗೆ ನೀಡುತ್ತಾನೆ. ಇವರು ಯಾವಾಗಲೂ ನೇರ ಚಲನೆಯನ್ನೇ ಹೊಂದಿರುತ್ತಾರೆ. ಅಪ್ರಕಾಶಕ ಗ್ರಹಗಳಾದ ಮಂಗಳ, ಬುಧ, ಗುರು, ಶುಕ್ರ, ಮತ್ತು ಶನಿ ಗ್ರಹಗಳನ್ನು ಪಂಚ ತಾರಾಗ್ರಹರೆಂದು ಕರೆಯುತ್ತಾರೆ. ರಾಹು-ಕೇತುಗಳು ಯಾವಾಗಲೂ ವಕ್ರಗತಿಯಲ್ಲೇ ಚಲಿಸುತ್ತಾರೆ.

ಪಂಚ ತಾರಾಗ್ರಹರಾದ ಮಂಗಳ, ಬುಧ, ಗುರು, ಶುಕ್ರ, ಮತ್ತು ಶನಿಗಳು ವರ್ಷದ ಕೆಲವೊಂದು ಸಮಯಗಳಲ್ಲಿ ಭೂಮಿಯಿಂದ ನೋಡಿದಾಗ ಹಿಮ್ಮುಖವಾಗಿ ಚಲಿಸುತ್ತಿರುವಂತೆ ಕಾಣುತ್ತದೆ. ಇದನ್ನೇ ಗ್ರಹಗಳ ವಕ್ರೀಚಲನೆ ಅಥವಾ ವಕ್ರತ್ವ ಎಂದು ಎನ್ನಲಾಗುತ್ತದೆ.

ವೇದಾಂಗ ಜ್ಯೋತಿಷ್ಯದ ಪ್ರಕಾರ ಗ್ರಹಗಳು ವಕ್ರಗತಿಯ ಚಲನೆಯಲ್ಲಿದ್ದಾಗ ಹೆಚ್ಚಿನ ಬಲವನ್ನು ಹೊಂದಿ ಹೆಚ್ಚಿನ ಪರಿಣಾಮ ಬೀರಬಲ್ಲ, ಕೆಲವೊಮ್ಮೆ ಬದುಕನ್ನೇ ಬದಲಿಸಬಲ್ಲ, ಫಲಗಳನ್ನು ಕೊಡಲು ಶಕ್ತರಾಗುತ್ತಾರೆ. ಸಾಮಾನ್ಯ ನಂಬಿಕೆಗಳ ಪ್ರಕಾರ ಜನ್ಮಕುಂಡಲಿಯಲ್ಲಿ ಪಾಪಗ್ರಹರಾದ ಮಂಗಳ ಮತ್ತು ಶನಿ ವಕ್ರಚಲನೆಯಲ್ಲಿದ್ದಾಗ ಅಶುಭ ಫಲಗಳನ್ನು ಹಾಗೂ ಶುಭಗ್ರಹರಾದ ಬುಧ, ಗುರು, ಮತ್ತು ಶುಕ್ರರು ವಕ್ರಿಚಲನೆಯಲ್ಲಿದ್ದಾಗ ಶುಭಫಲಗಳನ್ನು ನೀಡುತ್ತಾರೆ.  ಕೆಲ ಜ್ಯೋತಿಷಿಗಳ ಪ್ರಕಾರ ವಕ್ರೀಗ್ರಹರು ಉಚ್ಚರಾಶಿಗಳಲ್ಲಿದ್ದರೆ ಅಶುಭಫಲವನ್ನೂ ಹಾಗೂ ನೀಚರಾಶಿಗಳಲ್ಲಿದ್ದರೆ ಶುಭಫಲವನ್ನೂ ನೀಡುತ್ತಾರೆ.

ಪ್ರಸ್ತುತ ಬುದ್ಧಿ-ಜ್ಞಾನಗಳಿಗೆ ಕಾರಕನಾಗಿರುವ ಬುಧ ಗ್ರಹನು ಜನವರಿ 15ರಿಂದ ಫೆಬ್ರವರಿ 3ರವರೆಗೆ ವಕ್ರಚಲನೆಯಲ್ಲಿರಲಿದ್ದಾನೆ. ಈ ಸಮಯದಲ್ಲಿ ವಕ್ರೀಬುಧನ ಪ್ರಭಾವವು ಅವನ ಕಾರಕತ್ವಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಉಂಟಾಗಲಿದ್ದು ವಿಚಿತ್ರ ಸನ್ನಿವೇಶಗಳಿಗೂ ದಾರಿಯಾಗಬಹುದು. ಬುಧ ಗ್ರಹನ ಪ್ರಮುಖ ಕಾರಕತ್ವಗಳೆಂದರೆ ಮಾತುಗಾರಿಕೆ, ವ್ಯವಹಾರ ಜ್ಞಾನ, ವ್ಯಾಪಾರ ಚಟುವಟಿಕೆ, ಬರವಣಿಗೆ, ಮಾರಾಟ, ಜೀವವಿಮೆ, ಪ್ರಚಾರ, ಸಂಪರ್ಕ, ಸಂವಹನ, ಇವುಗಳಿಗೆ ಸಂಬಂಧಿಸಿದ ಸಾಧನಗಳು, ಗಣಕಯಂತ್ರಗಳು, ಮೊಬೈಲ್‌ ಫೋನ್‌ಗಳು, ಇಂಟರ್‌ನೆಟ್‌ ಮುಂತಾದವುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ, ನಾವು ಇಂತಹ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಬುಧನ ವಕ್ರತ್ವದ ಪ್ರಭಾವದಿಂದಾಗಿ ಹೆಚ್ಚು ಮಾತನಾಡುವವರು ಕಡಿಮೆ ಮಾತನಾಡಬಹುದು, ಕಡಿಮೆ ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ವಾಚಾಳಿಗಳಾಗಿ ಬದಲಾಗಬಹುದು; ವ್ಯವಹಾರಗಳಲ್ಲಿ ಮಾತಿನಿಂದಾಗಿ ಏರಿಳಿತಗಳುಂಟಾಗಬಹುದು; ನಿರ್ಧಾರ ತೆಗೆದುಕೊಳ್ಳುವ ವಿವೇಚನಾ ಶಕ್ತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿರಲಿವೆ; ಹಾಗೂ ವಿದ್ಯಾರ್ಥಿಗಳ ಓದಿನ ಕಡೆಗಿನ ಆಸಕ್ತಿಗಳಲ್ಲಿ ಬದಲಾವಣೆಗಳು ಕಂಡುಬರಬಹುದು.

ಬುಧ ವಕ್ರಿ ಇರುವ ಸಂದರ್ಭದಲ್ಲಿ ಏನು ಮಾಡಬಾರದು

  1. ಹೊಸ ಒಪ್ಪಂದಗಳಿಗೆ ಹಾಗೂ ಹೊಸ ಸಂಬಂಧಗಳಿಗೆ ಒಳ್ಳೆಯ ಸಮಯವಲ್ಲ.
  2. ಯಾವುದೇ ವಿಷಯಗಳಲ್ಲಿ ಶೀಘ್ರ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯವಲ್ಲ.
  3. ಹೊಸ ಉದ್ಯೋಗ/ವ್ಯವಹಾರಗಳನ್ನು ಪ್ರಾರಂಭಿಸಲೂ ಇದು ಸೂಕ್ತ ಸಮಯವಲ್ಲ.
  4. ವಾಹನ, ಗಣಕಯಂತ್ರ, ಮೊಬೈಲ್‌ ಫೋನ್‌, ಹಾಗೂ ಇತರ ಸಂಪರ್ಕ ಸಾಧನಗಳನ್ನು ಕೊಳ್ಳಲು ಇದು ಸೂಕ್ತ ಸಮಯವಲ್ಲ.
  5. ಕೈಗೊಂಡ ಕಾರ್ಯಗಳಲ್ಲಿ ಅಡೆ-ತಡೆಗಳು ಹಾಗೂ ಅಡ್ಡಿ-ಆತಂಕಗಳು ತಲೆದೋರಬಹುದು.

ಏನು ಮಾಡಬೇಕು?

ಹೆಚ್ಚಿನ ಒತ್ತಡಗಳಿಗೆ ಒಳಗಾಗದೆ ಧ್ಯಾನ ಮುಂತಾದ ಮನಸ್ಸನ್ನು ಶಾಂತಗೊಳಿಸುವ ಪ್ರಕ್ರಿಯೆಗಳಲ್ಲಿ ತೊಡಗಿಕೊಳ್ಳುವುದು ಇದಕ್ಕಿರುವ ಒಂದು ಒಳ್ಳೆಯ ಉಪಾಯ. ಇದೂ ಒಂದು ತಾತ್ಕಾಲಿಕ ಬೆಳವಣಿಗೆಯಾಗಿದ್ದು ಇದೂ ಸರಿದು ಹೋಗಲಿದೆ ಎಂದು ತಿಳಿದು ದೃಢವಾದ ಮನಸ್ಸಿನಿಂದ ಇರುವುದು ಹೆಚ್ಚು ಸಹಾಯಕವಾಗಲಿದೆ.

ಬುಧನನ್ನು ಶಾಂತಗೊಳಿಸಲು ಸುಲಭ ಪರಿಹಾರಗಳು:

  1. ಹಸಿರು ಬಣ್ಣದ ವಸ್ತ್ರ ಅಥವಾ ಹೆಸರುಕಾಳನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡುವುದು.
  2. ಬುಧನ ಅಧಿದೇವತೆಯಾದ ವಿಷ್ಣುವಿನ ಸರಳ ಮಂತ್ರಗಳನ್ನು ಪಠಿಸುವುದು ಅಥವಾ ದರ್ಶನ ಮಾಡುವುದು.
  3. ಬುಧವಾರಗಳಂದು ಉಪವಾಸವನ್ನಾಚರಿಸಿ (ಲಘು ಉಪಹಾರ ಸೇವಿಸಬಹದು) ಗಣೇಶನ ದೇವಾಲಯದಲ್ಲಿ ಮೋದಕಗಳನ್ನು ಸಮರ್ಪಿಸುವುದು.
  4. ರಾತ್ರಿ ಮಲಗುವಾಗ ಒಂದು ಪಾತ್ರೆಯಲ್ಲಿ ನೀರು ತುಂಬಿಟ್ಟು ಬೆಳಿಗ್ಗೆ ಎದ್ದ ನಂತರ ಅದನ್ನು ಒಂದು ಅರಳಿ ಮರಕ್ಕೆ ಹಾಕುವುದು.
  5. ಎಲ್ಲರೊಂದಿಗೂ ಸೌಜನ್ಯದಿಂದ ವರ್ತಿಸಿ ಅರ್ಹರಿಗೆ ಕೈಲಾದ ಸಹಾಯ ಮಾಡುವುದು.

ಇದನ್ನೂ ಓದಿ: Makara Sankranti 2022 Astrology : ದ್ವಾದಶ ರಾಶಿಗಳ ಮಕರ ಸಂಕ್ರಾಂತಿ ಸೂರ್ಯ ಗೋಚಾರ ಫಲಗಳು

ಇದನ್ನೂ ಓದಿ: astrology tips for home : ಜನವರಿ ತಿಂಗಳಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಶುಭಕರ

(Retrograde Mercury in Transit and Remedies)

Comments are closed.