Shri Swami Samartha Mantras: ಭಯಪಡಬೇಡ, ನಾನು ನಿನ್ನ ಬೆನ್ನಿಗಿದ್ದೇನೆ! ಕೋಟಿ ಕೋಟಿ ಜನರ ಪೊರೆಯುತ್ತೆ ಸ್ವಾಮಿ ಸಮರ್ಥರ ಈ ಅಭಯ
ಭಕ್ತರು ಇಂದಿಗೂ ನಿರಂತರವಾಗಿ ಜಪಿಸುವ "ಶ್ರೀ ಸ್ವಾಮಿ ಸಮರ್ಥ" ಎಂಬ ಮಂತ್ರವು ಭಕ್ತರಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಅದಕ್ಕಿಂತಲೂ ಮಿಗಿಲಾಗಿ, ಸ್ವಾಮಿಗಳು ನೀಡಿದ ಅಭಯ ವಾಕ್ಯ ಇಂದಿಗೂ ಜಗತ್ಪ್ರಸಿದ್ಧವಾಗಿದೆ:

“ಭಯಪಡಬೇಡ, ನಾನು ನಿನ್ನ ಬೆನ್ನಿಗಿದ್ದೇನೆ!”- ಯಾವಾಗ ಇಡೀ ಜಗತ್ತೇ ನಮ್ಮ ವಿರುದ್ಧ ನಿಂತಿದೆ ಎನಿಸುತ್ತದೆಯೋ, ಆಗ ಕಿವಿಯಲ್ಲಿ ಮೊಳಗುವ ಈ ಒಂದು ಅಭಯ ವಾಕ್ಯ ಕೋಟ್ಯಂತರ ಧೃತಿಗೆಟ್ಟ ಮನಸ್ಸುಗಳಿಗೆ ಆನೆ ಬಲ ತರುತ್ತದೆ. ಈ ಮಾತು ಬೇರೆ ಯಾರದ್ದೂ ಅಲ್ಲ; 19ನೆಯ ಶತಮಾನದಲ್ಲಿ ಭಾರತೀಯ ಆಧ್ಯಾತ್ಮಿಕ ರಂಗದಲ್ಲಿ ಧ್ರುವತಾರೆಯಂತೆ ಬೆಳಗಿದ, ದತ್ತ ಪರಂಪರೆಯ ಪರಮ ಪೂಜ್ಯ ಗುರು ಶ್ರೀ ಸ್ವಾಮಿ ಸಮರ್ಥರದ್ದು (Shri Swami Samartha Mantras). ಕೇವಲ ಪವಾಡಗಳ ಮೂಲಕವಷ್ಟೇ ಅಲ್ಲದೆ, ತಮ್ಮ ಕರುಣಾಮಯಿ ದೃಷ್ಟಿ ಹಾಗೂ ಪ್ರೇರಣಾದಾಯಕ ಬೋಧನೆಗಳ ಮೂಲಕ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶಾದ್ಯಂತ ಭಕ್ತಿ ಸಾಮ್ರಾಜ್ಯವನ್ನು ಕಟ್ಟಿದ ಅಕ್ಕಲಕೋಟೆ ಮಹಾರಾಜರ ಜೀವನ ಪುಟಗಳ ಮೇಲೊಂದು ವಿಶೇಷ ಬೆಳಕು.
ಹುತ್ತದಿಂದ ಪ್ರಕಟವಾದ ದತ್ತಾವತಾರ
ಶ್ರೀ ಸ್ವಾಮಿ ಸಮರ್ಥರ ಜನ್ಮದ ಇತಿಹಾಸವು ಒಂದು ದಿವ್ಯ ರಹಸ್ಯ. ಅವರ ತಂದೆ-ತಾಯಿ ಯಾರು, ಅವರು ಹುಟ್ಟಿದ್ದು ಎಲ್ಲಿ ಎಂಬ ಬಗ್ಗೆ ಯಾವುದೇ ಅಧಿಕೃತ ಐತಿಹಾಸಿಕ ದಾಖಲೆಗಳಿಲ್ಲ. ಆದರೆ, ಧಾರ್ಮಿಕ ಇತಿಹಾಸ ಹಾಗೂ ಭಕ್ತರ ದೃಢ ನಂಬಿಕೆಯ ಪ್ರಕಾರ, ಇವರು ಭಗವಾನ್ ದತ್ತಾತ್ರೇಯರ ತೃತೀಯ ಭೌತಿಕ ಅವತಾರ. 15ನೆಯ ಶತಮಾನದ ಮಹಾನ್ ಸಂತ ಶ್ರೀ ನರಸಿಂಹ ಸರಸ್ವತಿಯವರ ಮುಂದುವರಿದ ರೂಪವೇ ಇವರು.
ಐತಿಹ್ಯಗಳ ಪ್ರಕಾರ, ಶ್ರೀ ನರಸಿಂಹ ಸರಸ್ವತಿಯವರು ಆಂಧ್ರಪ್ರದೇಶದ ಶ್ರೀಶೈಲದ ಬಳಿಯ ಕರದಲಿ ವನದಲ್ಲಿ ಸುಮಾರು 300 ವರ್ಷಗಳ ಕಾಲ ದೀರ್ಘ ತಪಸ್ಸಿನಲ್ಲಿ ಲೀನರಾಗಿದ್ದರು. ಕಾಲಕ್ರಮೇಣ ಅವರ ಸುತ್ತ ಹುತ್ತ ಬೆಳೆದುಕೊಂಡಿತ್ತು. ಒಮ್ಮೆ ಕಟ್ಟಿಗೆ ಕಡಿಯುವವನೊಬ್ಬನ ಕೊಡಲಿ ತಿಳಿಯದೇ ಆ ಹುತ್ತಕ್ಕೆ ತಗುಲಿದಾಗ, ಅದರಿಂದ ರಕ್ತ ಬರಲಾರಂಭಿಸಿತು. ತಕ್ಷಣವೇ ಆ ಹುತ್ತ ಸೀಳಿ, ಅದರಿಂದ ದಿವ್ಯ ತೇಜಸ್ಸಿನೊಂದಿಗೆ ಪ್ರಕಟವಾದ ಮಹಾಪುರುಷರೇ ಶ್ರೀ ಸ್ವಾಮಿ ಸಮರ್ಥರು. ಇವರ ತೊಡೆಯ ಮೇಲೆ ಆ ಕೊಡಲಿಯ ಗುರುತು ಇತ್ತೆಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ.
ಹಿಮಾಲಯದಿಂದ ಅಕ್ಕಲಕೋಟೆಯವರೆಗೆ: ದಿವ್ಯ ಸಂಚಾರ
ಹುತ್ತದಿಂದ ಹೊರಬಂದ ನಂತರ ಸ್ವಾಮಿಗಳು ಭಾರತದಾದ್ಯಂತ ವ್ಯಾಪಕವಾಗಿ ಸಂಚರಿಸಿದರು. ಹಿಮಾಲಯ, ಟಿಬೆಟ್, ನೇಪಾಳ, ಕಾಶಿ, ಹರಿದ್ವಾರ, ಪುರಿ ಹಾಗೂ ರಾಮೇಶ್ವರಂ ಸೇರಿದಂತೆ ದೇಶದ ಬಹುತೇಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರು. ಈ ಸಂಚಾರದ ಅವಧಿಯಲ್ಲಿ ಅವರು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಪರಿಚಿತರಾಗಿದ್ದರು.
ಅಂತಿಮವಾಗಿ ಮಹಾರಾಷ್ಟ್ರದ ಮಂಗಳವೇಢ ಎಂಬಲ್ಲಿ ದೀರ್ಘಕಾಲ ನೆಲೆಸಿದ್ದ ಸ್ವಾಮಿಗಳು, ಕ್ರಿಸ್ತಶಕ 1856ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ಅಕ್ಕಲಕೋಟೆ ಗ್ರಾಮವನ್ನು ಪ್ರವೇಶಿಸಿದರು. ಅಲ್ಲಿನ ಪ್ರಮುಖರಾದ ಚಿಂತೋಪಂತ ತೋಳ ಎಂಬುವರ ಆಹ್ವಾನದ ಮೇರೆಗೆ ಅಕ್ಕಲಕೋಟೆಯಲ್ಲೇ ಸ್ಥಿರವಾಗಿ ನೆಲೆಸಿದರು. ಮುಂದಿನ 22 ವರ್ಷಗಳ ಕಾಲ ಅವರು ಇಲ್ಲೇ ವಾಸ್ತವ್ಯ ಹೂಡಿದ್ದರಿಂದ ಅವರಿಗೆ ‘ಅಕ್ಕಲಕೋಟೆ ಸ್ವಾಮಿ ಸಮರ್ಥ’ ಎಂಬ ಹೆಸರು ಶಾಶ್ವತವಾಯಿತು. ಅವರು ಹೆಚ್ಚಾಗಿ ತಮ್ಮ ಶಿಷ್ಯ ಚೊಳಪ್ಪನ ಮನೆಯಲ್ಲಿ ಅಥವಾ ಅಲ್ಲಿನ ಪ್ರಸಿದ್ಧ ಆಲದ ಮರದ (ವಟವೃಕ್ಷ) ಕೆಳಗೆ ಇರುತ್ತಿದ್ದರು.
ಧರ್ಮದ ಬೇಲಿ ಮೀರಿದ ಕರುಣಾಮಯಿ
ಸ್ವಾಮಿ ಸಮರ್ಥರ ದರ್ಬಾರ್‌ನಲ್ಲಿ ಯಾವುದೇ ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಭೇದವಿರಲಿಲ್ಲ. ರಾಜ ಮಹಾರಾಜರಿಂದ ಹಿಡಿದು ಸಾಮಾನ್ಯ ಕೂಲಿ ಕಾರ್ಮಿಕರವರೆಗೆ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ವರ್ಗದ ಜನರೂ ಅವರ ಆಶೀರ್ವಾದಕ್ಕಾಗಿ ಬರುತ್ತಿದ್ದರು. ಅವರು ಸಮಾಜದಲ್ಲಿದ್ದ ಮೂಢನಂಬಿಕೆಗಳು ಹಾಗೂ ಬಾಹ್ಯ ಆಡಂಬರಗಳನ್ನು ತೀವ್ರವಾಗಿ ವಿರೋಧಿಸಿದರು. ಕರ್ಮ ಸಿದ್ಧಾಂತ ಹಾಗೂ ಆತ್ಮಾವಲೋಕನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಅವರು, “ನಿನ್ನೊಳಗೇ ನೋಡು, ಅಲ್ಲಿ ನಾನು ಸಿಗುತ್ತೇನೆ” ಎಂದು ಬೋಧಿಸಿದರು.
ಅವರ ಭಕ್ತರು ಇಂದಿಗೂ ನಿರಂತರವಾಗಿ ಜಪಿಸುವ “ಶ್ರೀ ಸ್ವಾಮಿ ಸಮರ್ಥ” ಎಂಬ ಮಂತ್ರವು ಭಕ್ತರಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಅದಕ್ಕಿಂತಲೂ ಮಿಗಿಲಾಗಿ, ಸ್ವಾಮಿಗಳು ನೀಡಿದ ಅಭಯ ವಾಕ್ಯ ಇಂದಿಗೂ ಜಗತ್ಪ್ರಸಿದ್ಧವಾಗಿದೆ:
“ಭಿಹೂ ನಕೋಸ್, ಮೀ ತುಝ್ಯಾ ಪಾಠಿಶಿ ಆಹೇ” (ಮರಾಠಿ: भिऊ नकोस, मी तुझ्या पाठीशी आहे)
ಅರ್ಥ: “ಭಯಪಡಬೇಡ, ನಾನು ನಿನ್ನ ಬೆನ್ನಿಗಿದ್ದೇನೆ (ನಿನ್ನೊಂದಿಗಿದ್ದೇನೆ).”
ಮಹಾಸಮಾಧಿ ಮತ್ತು ಅಮರ ಪರಂಪರೆ
ಶ್ರೀ ಸ್ವಾಮಿ ಸಮರ್ಥರು 1878ರ ಏಪ್ರಿಲ್ 30 ರಂದು (ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಶುದ್ಧ ತ್ರಯೋದಶಿ) ಅಕ್ಕಲಕೋಟೆಯಲ್ಲಿ ಮಹಾಸಮಾಧಿ ಹೊಂದಿದರು. ಅವರು ದೈಹಿಕವಾಗಿ ಮರೆಯಾಗುವ ಮುನ್ನ, ತಾವು ಸದಾ ಭಕ್ತರೊಂದಿಗೇ ಇರುವುದಾಗಿ ಭರವಸೆ ನೀಡಿದ್ದರು.
ಮನೆಯಲ್ಲಿ ‘ಉರ್ಲಿ’ ಇಟ್ಟರೆ ಇಷ್ಟೆಲ್ಲಾ ಲಾಭ ಇದೆಯಾ? ವಾಸ್ತುಶಾಸ್ತ್ರ ಹೇಳುವ ಅಸಲಿ ರಹಸ್ಯ ಇಲ್ಲಿದೆ!
ಸ್ವಾಮಿಗಳು ಸಮಾಜಕ್ಕೆ ಶ್ರೇಷ್ಠ ಶಿಷ್ಯ ಪರಂಪರೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಶೇಗಾಂವ್‌ನ ಶ್ರೀ ಗಜಾನನ ಮಹಾರಾಜರು, ಮುಂಬೈನ ಶಂಕರ ಮಹಾರಾಜರು ಹಾಗೂ ಪುಣೆಯ ಬೀಡ್ಕರ್ ಮಹಾರಾಜರು ಇವರ ಪ್ರಮುಖ ಶಿಷ್ಯರಾಗಿದ್ದಾರೆ. ಪ್ರಸ್ತುತ ಅಕ್ಕಲಕೋಟೆಯಲ್ಲಿರುವ ಸ್ವಾಮಿಗಳ ವಟವೃಕ್ಷ ದೇವಸ್ಥಾನವು (ಆಲದ ಮರದ ಮಂದಿರ) ಒಂದು ಪವಿತ್ರ ಧಾರ್ಮಿಕ ಕೇಂದ್ರವಾಗಿದ್ದು, ಪ್ರತಿದಿನ ಸಹಸ್ರಾರು ಭಕ್ತರು ಸ್ವಾಮಿಗಳ ದರ್ಶನ ಪಡೆದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

