ಸಿಗಂಧೂರು ದೇವಸ್ಥಾನ ಸರಕಾರದ ವಶಕ್ಕಿಲ್ಲ : ಸಿಎಂ ಯಡಿಯೂರಪ್ಪ

ಶಿವಮೊಗ್ಗ : ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಸಿಗಂಧೂರು ಚೌಡೇಶ್ವರಿ ದೇವಸ್ಥಾನವನ್ನು ರಾಜ್ಯ ಸರಕಾರ ವಶಕ್ಕೆ ಪಡೆಯುವುದಿಲ್ಲ. ಕೇವಲ ಹಣಕಾಸು ನಿರ್ವಹಣೆಗಾಗಿ ಮಾತ್ರವೇ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಆತಂರಿಕ ಕಲಹ ಉಂಟಾದ ಬೆನ್ನಲ್ಲೇ ಜಿಲ್ಲಾಡಳಿತ ದೇವಸ್ಥಾನದ ನಿರ್ವಹಣೆಗೆ ಸಮಿತಿಯೊಂದನ್ನು ನೇಮಿಸಿದೆ. ರಾಜ್ಯ ಸರಕಾರವೇ ದೇವಸ್ಥಾನವನ್ನು ತನ್ನ ವಶಕ್ಕೆ ಪಡೆಯಲಿದೆ ಅನ್ನೋ ಮಾತು ಕೇಳಿಬಂದಿದೆ. ಆದರೆ ಈ ವಿಚಾರವಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಹಣಕಾಸು ದುರುಪಯೋಗವಾಗಬಾರದು. ಸಿಗಂಧೂರಿನ ವಾಸ್ತವಿಕತೆಯನ್ನು ಅವಲೋಕಿಸಿ ಸಮಿತಿಯನ್ನು ರಚಿಸಲಾಗಿದೆ. ಆಡಳಿತದಲ್ಲಿ ಪಾದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಇದೀಗ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.

ದೇವಸ್ಥಾನವನ್ನು ಸರಕಾರ ವಶಕ್ಕೆ ಪಡೆಯುವುದಿಲ್ಲ. ಬದಲಾಗಿ ದೇವಸ್ಥಾನಕ್ಕೆ ಭಕ್ತರು ಚಿನ್ನಾಭರಣ ಗಳನ್ನು ಕಾಣಿಕೆಯ ರೂಪದಲ್ಲಿ ನೀಡುತ್ತಿದ್ದಾರೆ. ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಆದಾಯ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಲೆಕ್ಕ ಪತ್ರ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.

Comments are closed.