ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೊರೊನಾ ಪೀಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಭಾನುವಾರವಷ್ಟೇ ಕೊರೊನಾಕ್ಕೆ ಮಹಿಳೆಯೋರ್ವರು ಬಲಿಯಾದ ಬೆನ್ನಲ್ಲೇ ಇದೀಗ 67 ವರ್ಷದ ವೃದ್ದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಬಂಟ್ವಾಳ ಪೇಟೆಯನ್ನೇ ಸೀಲ್ ಡೌನ್ ಮಾಡಲಾಗಿದ್ದು, ಪೇಟೆಗೆ ಬರುವ ಎಲ್ಲಾ ಮಾರ್ಗಗಳನ್ನೂ ಬಂದ್ ಮಾಡಲಾಗಿದೆ.

ಕಳೆದ ಭಾನುವಾರವಷ್ಟೇ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಸಾವನ್ನಪ್ಪಿದ್ದ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಬಂಟ್ವಾಳದ ಕೆಳಪೇಟೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿತ್ತು. ಆದ್ರೀಗ 67 ವರ್ಷದ ವೃದ್ದ ಮಹಿಳೆಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಹೀಗಾಗಿ ಜಿಲ್ಲಾಡಳಿತ ಬಂಟ್ವಾಳದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಬಂಟ್ವಾಳ ಪೇಟೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು, ಜನರು ಮನೆಯಿಂದ ಹೊರಗೆ ಬಾರದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ.

ಮಾತ್ರವಲ್ಲ ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನೂ ಜಿಲ್ಲಾಡಳಿತ ಬಂದ್ ಮಾಡಿದೆ. ಯಾವುದೇ ಕಾರಣಕ್ಕೂ ಜನರು ಸಂಚರಿಸಬಾರದು ಹಾಗೂ ವಾಹನಗಳು ಓಡಾಟ ನಡೆಸಬಾರದೆಂಬ ನಿಟ್ಟಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಇನ್ನು ಹೊರ ಭಾಗದ ಜನರು ಬಂಟ್ವಾಳ ಪ್ರದೇಶಿಸದಂತೆ ಎಚ್ಚರಿಕೆ ವಹಿಸೋ ಸಲುವಾಗಿ ಬಂಟ್ವಾಳ ಪೇಟೆ ಸಂಪರ್ಕಿಸುವ ಮಾರ್ಗದ ಎಲ್ಲಾ ರಸ್ತೆಗಳನ್ನು ಜಿಲ್ಲಾಡಳಿತ ಮಣ್ಣು ಸುರಿದು ಬಂದ್ ಮಾಡಿದೆ.