ಕೊರೊನಾ ಹೆಚ್ಚಲು ಕಾರಣವಾಯ್ತಾ ಹೋಮ್ ಕ್ವಾರಂಟೈನ್ ? ದ.ಕ. ಗ್ರಾಮೀಣ ಭಾಗದಲ್ಲಿ ಪಾಲನೆಯಾಗ್ತಿಲ್ಲ ಲಾಕ್ ಡೌನ್ !

1

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಗರದ ಪ್ರದೇಶಗಳಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗ್ತಿದ್ರೆ, ಗ್ರಾಮೀಣ ಭಾಗಗಳಲ್ಲಿ ಅಷ್ಟಾಗಿ ಪಾಲನೆಯಾಗ್ತಿಲ್ಲ. ಜೊತೆಗೆ ಸರಕಾರದ ಹೋಮ್ ಕ್ವಾರಂಟೈನ್ ನಿಂದಲೇ ಕೊರೊನಾ ಸೋಂಕು ವ್ಯಾಪಿಸುತ್ತಿದ್ಯಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ !

ಹೌದು, ಕರಾವಳಿ ಜಿಲ್ಲೆಗಳ ಮಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಯೇ ಸೋಂಕು ಹೆಚ್ಚಾಗಿ ವ್ಯಾಪಿಸಿದೆ ಅನ್ನೋದು ಆತಂಕಕಾರಿ ಬೆಳವಣಿಗೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಗೊಳಿಸಿತ್ತು. ಆರಂಭದಲ್ಲಿ ನಗರ ಭಾಗಗಳಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘನೆಯಾದ್ರೂ ನಂತರದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಅವರು ಎಚ್ಚೆತ್ತು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು.

ಅಲ್ಲದೇ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಆಚರಿಸಲಾಗುತ್ತಿದೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಲಾಕ್ ಡೌನ್ ಆದೇಶವನ್ನು ಅಷ್ಟಾಗಿ ಪಾಲನೆ ಮಾಡಲಾಗಿಲ್ಲ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿಯೂ ಲಾಕ್ ಡೌನ್ ಹೇಳುವಷ್ಟರ ಮಟ್ಟಿಗೆ ಎಫೆಕ್ಟ್ ಆಗಿದ್ದಂತೆ ಕಾಣಿಸುತ್ತಿಲ್ಲ. ಇದರಿಂದಾಗಿಯೇ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ.

ಇನ್ನೊಂದೆಡೆ ಸರಕಾರ ಜಾರಿಗೆ ತಂದಿರೋ ಹೋಮ್ ಕ್ವಾರಂಟೈನ್ ಪದ್ದತಿಯಿಂದಲೇ ಕೊರೊನಾ ಸೋಂಕು ಹರಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವ ಹಲವು ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ. ಆರಂಭದಲ್ಲಿ ವಿದೇಶದಿಂದ ಬಂದವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೆ ವಿದೇಶದಿಂದ ಬಂದವರು ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿಯೇ ವಾಸ ಮಾಡಬೇಕಿತ್ತು. 14 ದಿನಗಳ ಕಾಲ ಯಾರ ಸಂಪರ್ಕವೂ ಇಲ್ಲದೇ ಕ್ವಾರಂಟೈನ್ ಗೆ ಒಳಪಡಬೇಕೆಂದು ಸರಕಾರ ಹೇಳಿತ್ತು. ಆದರೆ ಹೋಮ್ ಕ್ವಾರಂಟೈನ್ ನಲ್ಲಿ ಇರುವವರು ಮನೆಯ ಒಳಗೆ ಕ್ವಾರಂಟೈನ್ ನಡೆಸುತ್ತಿದ್ದಾರೆ.

ಅಲ್ಲದೇ ಮನೆಯವರೊಂದಿಗೆ ಬೆರೆಯುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್ ನಲ್ಲಿದ್ದವರ ಮನೆಗಳಿಂದಲೇ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ದೆಹಲಿಯಿಂದ ಮರಳಿದ್ದ ಉಪ್ಪಿನಂಗಡಿಯ ವ್ಯಕ್ತಿಯ ಪತ್ನಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಇದೀಗ ಬಂಟ್ವಾಳದಲ್ಲಿ ದುಬೈನಿಂದ ಬಂದಿದ್ದ ವ್ಯಕ್ತಿಯ ತಾಯಿ ಕೊರೊನಾಕ್ಕೆ ಬಲಿಯಾಗಿದ್ರೆ, ಅಜ್ಜಿಯ ವರದಿಗಾಗಿ ಕಾಯಲಾಗುತ್ತಿದೆ. ಸಾಲದಕ್ಕೆ ಪಕ್ಕದ ಮನೆಯ ವೃದ್ದ ಮಹಿಳೆಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಹೀಗಾಗಿಯೇ ಆರೋಗ್ಯ ಇಲಾಖೆ ಹೋಮ್ ಕ್ವಾರಂಟೈನ್ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಮಾತ್ರವಲ್ಲ, ಕ್ವಾರಂಟೈನ್ ಗೆ ಒಳಗಾಗೋ ವ್ಯಕ್ತಿಗಳನ್ನು ಹೋಮ್ ಕ್ವಾರಂಟೈನ್ ಬದಲು, ಹೋಟೆಲ್ ಅಥವಾ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿವೆ.

ಮಂಗಳೂರು ನಗರ ಭಾಗಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ರೆ, ಗ್ರಾಮೀಣ ಭಾಗಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಬಂಟ್ವಾಳ ತಾಲೂಕಿನಲ್ಲಿ ಇದುವರೆಗೆ 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟದ್ದು, ಮಗು ಸೇರಿದಂತೆ ಇಬ್ಬರು ಈಗಾಗಲೇ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಓರ್ವರು ಮೃತಪಟ್ಟಿದ್ದರೆ, ಇನ್ನೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊನೆಗೂ ಬಂಟ್ವಾಳವನ್ನು ಸೀಲ್ ಡೌನ್ ಮಾಡಲಾಗಿದೆ. ಜಿಲ್ಲಾಡಳಿತ ಗ್ರಾಮೀಣ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕೂಗು ಕೇಳಿಬರುತ್ತಿದೆ.

1 Comment
  1. K.R.K.Sharma.Hyderabad.ph.9346666256. says

    Very good job.

Leave A Reply

Your email address will not be published.