ಉಡುಪಿ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ : ಕೃಷ್ಣನೂರಿನಲ್ಲಿ ಬಿಗಿ ಬಂದೋಬಸ್ತ್
ಕೃಷ್ಣನ ನಾಡು ಉಡುಪಿಯಲ್ಲಿ ಈ ಬಾರಿ ಪರ್ಯಾಯ ಮಹೋತ್ಸವ ಸಂಭ್ರಮ ರಂಗೇರಿದೆ. ಈ ಬಾರಿ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ಶ್ರೀಪಾದರು ಪೀಠಾರೋಹಣ ಮಾಡಲಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆ ಹಾಗೂ ಹೊರ ಭಾಗದಿಂದ ಒಟ್ಟೂ 1500ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಉಡುಪಿ ಪರ್ಯಾಯ ಮಹೋತ್ಸವಕ್ಕೆ ಗಣ್ಯಾತಿಗಣ್ಯರು ಆಗಮಿಸುತ್ತಾರೆ. ಮಾತ್ರವಲ್ಲದೇ ಭಕ್ತಗಣವಂತೂ ಕಿಕ್ಕಿರಿದು ಸೇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಬ್ಬರು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, 8 ಡಿವೈಎಸ್ಪಿ, 21 ಪೊಲೀಸ್ ನಿರೀಕ್ಷಕರು, 61 ಪೊಲೀಸ್ ಉಪನಿರೀಕ್ಷಕರು, 110 ಸಹಾಯಕ ಪೊಲೀಸ್ ಉಪನಿರೀಕ್ಷಕರು, 812 ಪೊಲೀಸ್ ಸಿಬ್ಬಂದಿ ಹಾಗೂ 200 ಗೃಹನಿರೀಕ್ಷಕರು, 4 ಕೆಎಸ್ಆರ್ಪಿ,14 ಡಿಎಆರ್, 5 ವಿಧ್ವಂಸಕ ಕೃತ್ಯ ತಡೆ ಪಡೆ ನೇಮಕ ಮಾಡಲಾಗಿದೆ.
ಇದರ ಜೊತೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ಸುತ್ತ 70ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರ ಜೊತೆಯಲ್ಲಿ 6 ಪೊಲೀಸ್ ಸಹಾಯವಾಣಿ, 6 ಅಗ್ನಿಶಾಮಕದಳ ವಾಹನ, 6 ಆಂಬ್ಯುಲೆನ್ಸ್, 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 3 ಡ್ರೋನ್ ಕ್ಯಾಮರಾ, 120 ಬೈನಾಕುಲರ್, 300 ಬ್ಯಾರಿಕೇಡ್ಗಳು,1 ಕ್ಯೂಆರ್ಟಿ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಇಪಿಎಫ್, ಇಎಸ್ಐ ಸೌಲಭ್ಯ : ರಾಜ್ಯಕ್ಕೆ ಮಾದರಿ ಎನಿಸಿದ ಉಡುಪಿ ಜಿಲ್ಲೆ
ಪರ್ಯಾಯ ಎಂದರೆ ಅರ್ಥವೇ ಮತ್ತೊಬ್ಬರು ಇದ್ದಾರೆ ಎನ್ನುವುದಾಗಿದೆ. ಅಂತೆಯೇ ಶ್ರೀಕೃಷ್ಣಮಠದಲ್ಲಿ ಪ್ರತಿ 2 ವರ್ಷಗಳಿಗೆ ಒಮ್ಮೆ ಪರ್ಯಾಯ ಮಹೋತ್ಸವ ನಡೆಸಲಾಗುತ್ತದೆ. ಈ ಪರ್ಯಾಯ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಮಠದ ಅಷ್ಟ ಮಠಗಳಾದ – ಪೇಜಾವರ, ಕಾಣಿಯೂರು, ಸೋದೆ, ಪಲಿಮಾರು, ಕೃಷ್ಣಾಪುರ, ಶಿರೂರು, ಅದಮಾರು ಮತ್ತು ಪುತ್ತಿಗೆ ಮಠಗಳ ಶ್ರೀಗಳು ಪರ್ಯಾಯ ಪೀಠಾರೋಹಣ ಮಾಡುತ್ತಾರೆ.
ಜನವರಿ 18ರಂದು ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ನಡೆಯಲಿದ್ದು ಇದೇ ಮೊದಲ ಬಾರಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನೆ ಪೂರ್ಣಗೊಳಿಸಿರುವ ಶ್ರೀಗಳು ಜನವರಿ 9ರಂದು ಕಡಿಯಾಳಿ ಮೂಲಕ ಪುರಪ್ರವೇಶ ಮಾಡಿದ್ದಾರೆ.



