ಮಂಗಳೂರು : gehlot in kukke subramanya : ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರ ಶ್ರೀ ಕುಕ್ಕೆ ಸುಬ್ಮಹಣ್ಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಆಗಮಿಸಿದ್ದಾರೆ. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿರುವ ಗೆಹ್ಲೋಟ್ ಇಂದು ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗಿಯಾಗಿದ್ದಾರೆ. ನಾಳೆ ಸರ್ಪ ಸಂಸ್ಕಾರದ ಅಂತಿಮ ಸೇವೆ ಇರುವ ಹಿನ್ನೆಲೆಯಲ್ಲಿ ಇಂದು ಶ್ರೀ ಕ್ಷೇತ್ರದಲ್ಲಿಯೇ ಗೆಹ್ಲೋಟ್ ತಂಗಲಿದ್ದಾರೆ. ನಾಳೆ ಬೆಳಗ್ಗೆ ಪೂಜಾ ಕಾರ್ಯಗಳನ್ನು ಪೂರೈಸಿದ ಬಳಿಕ ಪತ್ನಿ ಸಮೇತರಾಗಿ ರಾಜ್ಯಪಾಲ ಗೆಹ್ಲೋಟ್ ಸುಬ್ರಹ್ಮಣ್ಯನ ದರ್ಶನವನ್ನು ಪಡೆಯಲಿದ್ದಾರೆ.
ಮಧ್ಯಾಹ್ನ 12:45ರ ಸುಮಾರಿಗೆ ಕುಕ್ಕೆಗೆ ಪತ್ನಿ ಅನಿತಾ ಗೆಹ್ಲೋಟ್ ಜೊತೆ ಆಗಮಿಸಿದ ಥಾವರ್ ಚಂದ್ ಗೆಹ್ಲೋಟ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನವಾಣೆ, ಸಚಿವ ಎಸ್. ಅಂಗಾರ, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕುಮಾರ್, ಪುತ್ತೂರು ಡಿವೈಎಸ್ಪಿ ಗಾನಾ ಪಿ ಕುಮಾರ್, ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಸೇರಿದಂತೆ ಹಲವರು ಗೌರವ ಸ್ವಾಗತ ಕೋರಿದರು.
ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವಗಳನ್ನು ಸ್ವೀಕರಿಸಿದ ಬಳಿಕ ಆದಿಶೇಷ ಗೆಸ್ಟ್ಹೌಸ್ನಲ್ಲಿ ವಿಶ್ರಾಂತಿಗೆ ತೆರಳಿದ ಗೆಹ್ಲೋಟ್ ಮಧ್ಯಾಹ್ನ 1:30 ಸುಮಾರಿಗೆ ದೇವಸ್ಥಾನದ ಬಳಿ ಬಂದರು. ಸರ್ಪ ಸಂಸ್ಕಾರದ ಸಂಕಲ್ಪ ತೊಟ್ಟಿರುವ ಹಿನ್ನೆಲೆಯಲ್ಲಿ ಸೂತಕ ಇರುವುದರಿಂದ ದೇವಸ್ಥಾನವನ್ನು ಪ್ರವೇಶಿಸದೇ ದೇವರ ಕಡೆ ಮುಖ ಮಾಡಿ ಕೈ ಮುಗಿದರು. ಇದಾದ ಬಳಿಕ ಸರ್ಪ ಸಂಸ್ಕಾರ ಯಾಗ ಶಾಲೆಗೆ ತೆರಳಿದ ರಾಜ್ಯಪಾಲರು ಅಲ್ಲಿ ವಿವಿಧ ವಿಧಿ ವಿಧಾನಗಳನ್ನು ಪೂರೈಸಿ ವಿಶ್ರಾಂತಿ ಕೊಠಡಿಗೆ ಮರಳಿದ್ದಾರೆ. ನಾಳೆ ಸರ್ಪ ಸಂಸ್ಕಾರದ ಪಿಂಡ ಪ್ರದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಳಿಕ ದೇವಸ್ಥಾನದ ಒಳಗೆ ಗೆಹ್ಲೋಟ್ ಪ್ರವೇಶಿಸಲಿದ್ದಾರೆ.
ರಾಜ್ಯಪಾಲ ಗೆಹ್ಲೋಟ್ ಭೇಟಿ ಹಿನ್ನೆಲೆಯಲ್ಲಿ ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯನ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯಪಾಲರು ಪೂಜಾ ಕಾರ್ಯವನ್ನು ಪೂರೈಸಿದ ಬಳಿಕ ಭಕ್ತರಿಗೆ ದೇಗುಲ ದರ್ಶನಕ್ಕೆ ಮುಕ್ತವಾಗಲಿದೆ. ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನು ಓದಿ : KL Rahul : ಕೆ.ಎಲ್ ರಾಹುಲ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಶೀಘ್ರ ಚೇತರಿಕೆಯ ಹಾದಿಯಲ್ಲಿದ್ದೇನೆಂದ ಕನ್ನಡಿಗ
governer thavar chand gehlot in kukke subramanya to perform sarpa samskara